ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಆಂತರೀಕ ಭಿನ್ನಮತ ತಾರಕಕ್ಕೇರುತ್ತಿದ್ದು, ಯತ್ನಾಳ್ ನೇತೃತ್ವದ ಬಿಜೆಪಿ ಭಿನ್ನರ ತಂಡ ಜ.31ರಂದು ಮಹತ್ವದ ಸಭೆ ನಡೆಯಲಿದ್ದು, ಅಂದೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕೆಂಬ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ಬುಧವಾರ ಈ ಸಂಬಂಧ ನಗರದಲ್ಲಿ ಮಾತನಾಡಿದ ಮಾಜಿ ಸಚಿವ ಕುಮಾರ ಬಂಗಾರಪ್ಪ, ಜ.31ರಂದು ನಾವು ಮಹತ್ವದ ಸಭೆ ನಡೆಸುತ್ತೇವೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಮ್ಮ ಕಡೆಯಿಂದ ಸೂಕ್ತವಾದವರನ್ನು ಕಣಕ್ಕೆ ಇಳಿಸುತ್ತೇವೆ. ಆವತ್ತಿನ ಸಭೆಯಲ್ಲಿ ನಮ್ಮ ಕಡೆಯಿಂದ ಯಾರನ್ನು ನಿಲ್ಲಿಸಬೇಕು ಎಂದು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಸಂಪರ್ಕ ಮಾಡಲು ಪ್ರಯತ್ನ ನಡೆಯುತ್ತಿದೆ. ರಾಮುಲು ಅವರು ನಮ್ಮ ಸಭೆಗೆ ಬರುತ್ತಾರೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ನಾಳೆ(ಜ.30) ಗೊತ್ತಾಗಲಿದೆ ಎಂದ ಅವರು, ಶಿಕಾರಿಪುರ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ರಾಜ್ಯಾಧ್ಯಕ್ಷರಾದ ಕಾರಣ ಒತ್ತಡಗಳಿಂದ ಕ್ಷೇತ್ರದ ಕಡೆ ಗಮನಹರಿಸಿಲ್ಲ ಎಂದು ಕಾಣಿಸುತ್ತದೆ ಎಂದು ಟೀಕಿಸಿದರು.