ಬೆಂಗಳೂರು : ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ಮಹಾಕುಂಭ ಮೇಳದಲ್ಲಿ ಸಂಭವಿಸಿರುವ ಕಾಲ್ತುಳಿತ ದುರಂತದಲ್ಲಿ ಕರ್ನಾಟಕ ರಾಜ್ಯದ ತಾಯಿ, ಮಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿ ತಾಲೂಕು ಯಲ್ಲೂರು ರಸ್ತೆ ವಡಗಾಂವ್ ಭಾಗದ ಮೇಘಾ ದೀಪಕ್ ಹತ್ತರವಾಠ (24), ಜ್ಯೋತಿ ದೀಪಕ್ ಹತ್ತರವಾಠ (44) ಹಾಗೂ ಬೆಳಗಾವಿ ತಾಲೂಕಿನ ಶೆಟ್ಟಿಗಲ್ಲಿ ಭಾಗದ ಅರುಣಾ ಖೋರ್ಪಡೆ (61), ಮಹಾದೇವಿ ಹಣಮಂತ ಬಾವಣೂರ (48) ಸಾವನ್ನಪ್ಪಿರುವುದಾಗಿ ಜಿಲ್ಲಾಡಳಿತ ದೃಢಪಡಿಸಿದೆ.
ಮೃತ ಜ್ಯೋತಿ ಅವರ ಪತಿ ದೀಪಕ್ ಹತ್ತರವಾಠ ಅವರಿಗೆ ಬೆಳಗ್ಗೆಯಿಂದ ಇಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಗ್‍ರಾಜ್‍ಗೆ ಪ್ರಯಾಣ ಬೆಳೆಸಿದ್ದ 13 ಜನರ ತಂಡದಲ್ಲಿ ಜ್ಯೋತಿ ಹತ್ತರವಾಠ ಮತ್ತು ಮೇಘಾ ಹತ್ತರವಾಠ ಸೇರಿದ್ದರು. ಆದರೆ, ದುರಂತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ವಡಗಾವಿಯ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ದುಃಖ ಮಡುಗಟ್ಟಿದೆ. ಸಂಬಂಧಿಕರು ಮತ್ತು ಸ್ನೇಹಿತರು ಅವರ ಮನೆಯತ್ತ ಧಾವಿಸುತ್ತಿದ್ದಾರೆ.
ಬುಧವಾರ ಈ ಕುರಿತು ದೀಪಕ್ ಹತ್ತರವಾಠ ಪ್ರತಿಕ್ರಿಯಿಸಿ, ‘ಜ.26ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತ್ನಿ, ಮಗಳು ಮತ್ತು ಅವರ ಇಬ್ಬರು ಸ್ನೇಹಿತರು ಪ್ರಯಾಗ್‍ರಾಜ್ ಹೋಗಿದ್ದರು. ನಿನ್ನೆ ರಾತ್ರಿ ಇಬ್ಬರೂ ವಿಡಿಯೊ ಕಾಲ್‍ನಲ್ಲಿ ಮಾತನಾಡಿದ್ದರು. ಆದರೆ, ಇಂದು ಬೆಳಗ್ಗೆ ನಮ್ಮ ಸಂಪರ್ಕಕ್ಕೆ ಅವರು ಸಿಗಲೇ ಇಲ್ಲ. ನಮ್ಮವರ ಜೊತೆ ಹೋಗಿದ್ದ ಅವರ ಸ್ನೇಹಿತರು ಕಾಲ್ತುಳಿತ ಉಂಟಾಗಿದೆ ಎಂದು ತಿಳಿಸಿದರು. ಇದರಲ್ಲಿ ಪತ್ನಿ ಮತ್ತು ಮಗಳಿಗೆ ಗಂಭೀರವಾಗಿ ಗಾಯವಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಮಧ್ಯಾಹ್ನ 3ರವರೆಗೆ ಏನೂ ಗೊತ್ತಾಗಲಿಲ್ಲ. ಕೊನೆಗೆ ಪ್ರಯಾಗ್‍ರಾಜ್‍ಗೆ ಕರೆದುಕೊಂಡು ಹೋಗಿದ್ದ ಚಿದಂಬರ ಪಾಟೀಲ ಅವರು ನಿಮ್ಮ ಪತ್ನಿ ಮತ್ತು ಮಗಳು ತೀರಿಕೊಂಡಿದ್ದಾರೆ ಎಂದು ವಿಷಯ ಮುಟ್ಟಿಸಿದ್ದಾರೆ’ ಎಂದು ಕಣ್ಣೀರು ಹಾಕಿದರು.
ದೀಪಕ ಹತ್ತರವಾಠ ಅವರ ಮನೆಗೆ ಭೇಟಿ ಸಾಂತ್ವನ ಹೇಳಿದ ಶಾಸಕ ಅಭಯ್ ಪಾಟೀಲ್, ಈಗಾಗಲೇ ಉತ್ತರಪ್ರದೇಶದ ಸಾರಿಗೆ ಸಚಿವ ದಯಾಶಂಕರ ಅವರ ಜೊತೆಗೆ ಮಾತಾಡಿದ್ದೇನೆ. ಈ ವೇಳೆ ಅವರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬಗ್ಗೆ ಹಾಗೂ ಕಾಣೆ ಆದವರನ್ನು ಪತ್ತೆ ಹಚ್ಚುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೇ ಮೃತರ ಮೃತದೇಹಗಳನ್ನು ಬೆಳಗಾವಿಗೆ ಕಳಿಸುವುದಾಗಿಯೂ ತಿಳಿಸಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಬೆಳಗಾವಿ ಜಿಲ್ಲೆಯಿಂದ 5 ಸಾವಿರ ಜನರು ಪ್ರಯಾಗಾರಕ್ಕೆ ಹೋಗಿದ್ದಾರೆ ಎಂದು ವಿವರಿಸಿದರು.
ಅದೇ ರೀತಿ, ಅರುಣಾ ಖೋರ್ಪಡೆ ಅವರು ಪತ್ನಿ ಜೊತೆಗೆ ಪ್ರಯಾಗ್‍ರಾಜ್‍ಗೆ ತೆರಳಿದ್ದರು. ಬುಧವಾರ ಬೆಳಿಗ್ಗೆ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದ ಅರುಣ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಅರುಣ್ ಮನೆಗೆ ಬೆಳಗಾವಿ ತಹಶೀಲ್ದಾರ್ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಖಚಿತಪಡಿಸಿದ್ದಾರೆ.
ಇತ್ತ ಶಿವಾಜಿ ನಗರದ ನಿವಾಸಿ ಮಹಾದೇವಿ ಹಣಮಂತ ಬಾವಣೂರ ಕೂಡ ಸಾವನ್ನಪ್ಪಿದ್ದಾರೆ. ಇವರ ಮನೆಗೆ ಶಾಸಕ ಆಸೀಫ್ ರಾಜು ಸೇಠ್ ಕುಟುಂಬಸ್ಥರನ್ನು ಭೇಟಿಯಾಗಿ ವಿಷಯ ಮುಟ್ಟಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಒಟ್ಟಿನಲ್ಲಿ ನಾಲ್ವರ ಸಾವಿನಿಂದ ಬೆಳಗಾವಿಯಲ್ಲಿ ಆತಂಕದ ಮನೆ ಮಾಡಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್, ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಭಕ್ತರು ಸಾವನ್ನಪ್ಪಿದ್ದಾರೆ. ಈ ಸಂಬಂಧ ವಿಶೇಷ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದು, ಆ ತಂಡ ಪ್ರಯಾಗ್‍ರಾಜ್‍ಗೆ ತೆರಳಿ ಮೃತದೇಹಗಳನ್ನು ವಾಪಸ್ ತರಲು ಪ್ರಕ್ರಿಯೆಯಲ್ಲಿ ತೊಡಗಲಿದ್ದಾರೆ ಎಂದು ತಿಳಿಸಿದರು.
ನಿನ್ನೆ ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಜ್ಯೋತಿ ಮತ್ತು ಮೇಘಾ ಅವರನ್ನು ಬುಧವಾರ ಬೆಳಗ್ಗೆ ಪ್ರಯಾಗ್‍ರಾಜ್‍ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಇಬ್ಬರೂ ಸಾವನ್ನಪ್ಪಿರುವುದಾಗಿದ್ದಾರೆ.
‘ಬಿಜೆಪಿ ನಾಯಕರ ಸಹಾಯದಿಂದ ಬೆಳಗಾವಿ ಜಿಲ್ಲೆಯ 300ಕ್ಕಿಂತ ಹೆಚ್ಚು ಜನ ಕುಂಭಮೇಳಕ್ಕೆ ಪ್ರಯಾಣ ಮಾಡಿದ್ದಾರೆಂಬ ಮಾಹಿತಿ ಇದೆ. ಈ ನಡುವೆ ಉತ್ತರ ಪ್ರದೇಶ ಸರಕಾರ ಯಾವುದೇ ಮಾಹಿತಿ ನೀಡದ ಹಿನ್ನೆಲೆ ಕನ್ನಡಿಗರ ಹಿತರಕ್ಷಣೆಗಾಗಿ ಓರ್ವ ಐಎಎಸ್ ಅಧಿಕಾರಿ, ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಹಾಗೂ ಪೊಲೀಸ್ ಅಧಿಕಾರಿಯೊಬ್ಬರನ್ನೊಳಗೊಂಡ ಮೂರು ಜನರ ತಂಡವನ್ನು ಈಗಾಗಲೇ ಪ್ರಯಾಗ್‍ರಾಜ್ ಕಳುಹಿಸಲಾಗಿದೆ.
-ಕೃಷ್ಣಭೈರೇಗೌಡ, ಕಂದಾಯ ಸಚಿವ
ಸಹಾಯವಾಣಿ ಆರಂಭ: ‘ಬೆಳಗಾವಿಯವರು ಕಾಲ್ತುಳಿತದಲ್ಲಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಅಲ್ಲಿ ತೊಂದರೆಯಲ್ಲಿ ಸಿಲುಕಿದವರು ಹಾಗೂ ಕುಂಭಮೇಳಕ್ಕೆ ಹೊರಟು ಕುಟುಂಬಸ್ಥರ ಸಂಪರ್ಕಕ್ಕೆ ಸಿಗದವರ ಬಗ್ಗೆ ಮಾಹಿತಿಗಾಗಿ ರಾಜ್ಯ ಸರಕಾರ ಸಹಾಯವಾಣಿ ಆರಂಭಿಸಿದ್ದು, 080- 2234 0676ಕ್ಕೆ ಸಂಪರ್ಕಿಸಬಹುದಾಗಿದೆ.
“ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಮೃತಪಟ್ಟಿರುವ ಸುದ್ದಿ ಕೇಳಿ ಬೇಸರವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ”
ಸಿದ್ದರಾಮಯ್ಯ, ಮುಖ್ಯಮಂತ್ರಿ