ಚಿಕ್ಕಮಗಳೂರು : ಕಳೆದ ಮೂರು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೇವಲ ಆರು ಮತಗಳಿಂದ ಪರಾಭವಗೊಂಡಿದ್ದ ಎ.ವಿ.ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ 30 ದಿನಗಳ ಒಳಗೆ ಮರು ಮತ ಎಣಿಕೆ ನಡೆಸುವಂತೆ ಆದೇಶಿಸಿದೆ.
ಬುಧವಾರ ರಾಜ್ಯ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಮುಂದಿನ 30 ದಿನದೊಳಗೆ ಮರು ಮತ ಎಣಿಕೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಏನಿದು ಪ್ರಕರಣ?: ಮೂರು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೆ.ಪ್ರಾಣೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.ವಿ.ಗಾಯತ್ರಿ ಶಾಂತೇಗೌಡ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಎ.ವಿ.ಗಾಯತ್ರಿ ಶಾಂತೇಗೌಡ ಕೇವಲ 6 ಮತಗಳ ಅಂತರದಲ್ಲಿ ಎಂ.ಕೆ.ಪ್ರಾಣೇಶ್ ವಿರುದ್ದ ಪರಾಭವಗೊಂಡಿದ್ದರು.
ಚುನಾವಣೆ ಫಲಿತಾಂಶದಿಂದ ಅಸಮಾಧಾನಗೊಂಡ ಎ.ವಿ.ಗಾಯತ್ರಿ ಶಾಂತೇಗೌಡ ಸರಕಾರದ 12 ಜನ ನಾಮ ನಿರ್ದೇಶಕರ ಮತದಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ 12 ಮತಗಳನ್ನು ಹೊರತುಪಡಿಸಿ ಮಾ.7ರ ಒಳಗೆ ಮರು ಮತ ಎಣಿಕೆ ಮಾಡಿ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಎಂ.ಕೆ.ಪ್ರಾಣೇಶ್ ಅವರು ವಿಧಾನ ಪರಿಷತ್, ಉಪಸಭಾಪತಿ ಹುದ್ದೆಯನ್ನು ಸದ್ಯ ಅಲಂಕರಿಸಿದ್ದು, ಮತಗಳ ಮರು ಎಣಿಗೆ ನಂತರ ಎಂ.ಕೆ.ಪ್ರಾಣೇಶ್ ಅವರಿಗೆ ಹಿನ್ನಡೆಯಾದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.