EBM News Kannada
Leading News Portal in Kannada

ವಿಜಯೇಂದ್ರಗೆ ದರ್ಪ, ಅಹಂಕಾರ ಹೆಚ್ಚಿದೆ : ಸಂಸದ ಕೆ.ಸುಧಾಕರ್‌ ವಾಗ್ದಾಳಿ

0


ಬೆಂಗಳೂರು : “ಯಾರನ್ನೂ ವಿಶ್ವಾಸಕ್ಕೆ ಪಡೆಯುವ ಗುಣ ವಿಜಯೇಂದ್ರಗೆ ಇಲ್ಲ. ಈಗಾಗಲೇ ಮುಖ್ಯಮಂತ್ರಿ ಆಗಿದ್ದೇನೆ ಎನ್ನುವ ಭಾವನೆ ಅವರಲ್ಲಿ ಇದೆ. ದರ್ಪ, ಅಹಂಕಾರ ಹೆಚ್ಚಿದೆ” ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಹಾಗೂ ಶ್ರೀರಾಮುಲು ನಂತರ ಇದೀಗ ವಿಜಯೇಂದ್ರ ವಿರುದ್ಧ ಮತ್ತೊಬ್ಬ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರು ಬಹಿರಂಗವಾಗಿಯೇ ಗುಡುಗಿದ್ದಾರೆ.

ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಸುಧಾಕರ್ ಅವರು, ʼತಮಗೆ ಬೇಕಾದವರಿಗೆ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಮಾಡಿಕೊಂಡಿದ್ದಾರೆ. ಇವತ್ತಿನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಧೋರಣೆ ಬೇಸರ ತಂದಿದೆʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ʼಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ನನ್ನ ರಾಜಕೀಯವನ್ನೇ ಪಣಕ್ಕೆ ಇಟ್ಟು ಬಿಜೆಪಿಗೆ ಬಂದೆ. ಆದರೆ ವಿಜಯೇಂದ್ರ ನನ್ನ ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಒಂದು ಸಂದೇಶ ಕಳುಹಿಸಿದರೆ ಅವರು ಪ್ರತಿಕ್ರಿಯಿಸುತ್ತಾರೆ. ಆದರೆ ಇವರು ಕರೆ ಸ್ವೀಕರಿಸುವುದಿಲ್ಲ. ಸಂದೇಶಕ್ಕೆ ಪ್ರತಿಕ್ರಿಯಿಸುವುದಿಲ್ಲʼ ಎಂದು ವಾಗ್ದಾಳಿ ನಡೆಸಿದರು.

ʼವಿಜಯೇಂದ್ರ ಪಕ್ಷವನ್ನು ಒಂದೇ ಸಲ ಮುಗಿಸಲು ಹೊರಟಿದ್ದಾರೆ. ಇವರ ಧೋರಣೆ, ಅಹಂಕಾರ, ಮನಸ್ಥಿತಿಗೆ ನನ್ನ ಧಿಕ್ಕಾರ ಇದೆ. ಇವರ ಧೋರಣೆ ಬದಲಾಯಿಸಿ ಅಥವಾ ಇವರನ್ನೇ ಬದಲಾಯಿಸಿ ಎಂದು ವರಿಷ್ಠರಿಗೆ ಮಾಡುತ್ತೇನೆ. ಅನೇ‌ಕ ಸಂಸದರು ನನ್ನ ಜೊತೆ ಭಾವನೆ ಹಂಚಿಕೊಂಡಿದ್ದಾರೆʼ ಎಂದು ಹೇಳಿದರು.

ʼಕೇವಲ ಬಸವರಾಜ ಬೊಮ್ಮಾಯಿ‌ಯವರ ಜೊತೆ ಚೆನ್ನಾಗಿ ಕೆಲಸ ಮಾಡಿದ್ದೇವೆ ಎಂದು ನಮ್ಮ ಮೇಲೆ ದ್ವೇಷನಾ? ವಿಜಯೇಂದ್ರ‌ ಯಡಿಯೂರಪ್ಪನವರ ಮಗ ಆಗಿರಬಹುದು. ಆದರೆ ಅವರಿಗೆ ಇವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಇವರದ್ದು ದ್ವೇಷದ ರಾಜಕಾರಣʼ ಎಂದು ಆಕ್ರೋಶ ಹೊರಹಾಕಿದರು.

Leave A Reply

Your email address will not be published.