EBM News Kannada
Leading News Portal in Kannada

ದೇವದಾಸಿ ಪದ್ಧತಿ ಗಮನಕ್ಕೆ ಬಂದರೆ ಡಿಸಿ-ಎಸ್ಪಿ ವಿರುದ್ಧ ಮುಲಾಜಿಲ್ಲದೆ ಕ್ರಮ: ಸಿದ್ದರಾಮಯ್ಯ

0


ಬೆಂಗಳೂರು: ದೇವದಾಸಿ ಪದ್ಧತಿ ನಿಷೇಧವಾಗಿದೆ. ರಾಜ್ಯದಲ್ಲಿ ಎಲ್ಲಿಯಾದರೂ ನಡೆದದ್ದು ಗಮನಕ್ಕೆ ಬಂದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ, ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ದೇವದಾಸಿ ಪದ್ದತಿ ಯಾವುದೇ ಜಿಲ್ಲೆಗಳಲ್ಲಿ ನಡೆದರೆ ಅದಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರೇ ನೇರ ಹೊಣೆ ಎಂದು ಹೇಳಿದರು.

ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಈ ಕುರಿತು ಯಾವುದೇ ದೂರಿಗೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು. ವೈಜ್ಞಾನಿಕವಾಗಿ ದೇವದಾಸಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಬೇಕೆಂಬುದು ಅವರ ಬೇಡಿಕೆಯಾಗಿದೆ. ದೇವದಾಸಿ ಸಮಸ್ಯೆ ಮತ್ತು ಪುನರ್ವಸತಿ ಬಗ್ಗೆ ಸಮಗ್ರ ವರದಿ ಸಿದ್ದಪಡಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದರು.

ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಕಾಡಿನಿಂದ ಹೊರಗೆ ಹಾಕಬಾರದು. ಅರಣ್ಯ ಹಕ್ಕು ಸಮಿತಿ ನಿಗದಿತವಾಗಿ ಸಭೆಗಳನ್ನು ನಡೆಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ತ್ವರಿತಗೊಳಿಸಬೇಕು. 3,430 ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಲು ಇನ್ನೂ ಬಾಕಿಯಿದ್ದು, ಇದನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಿದ ಬಳಿಕ ಪಹಣಿಯಲ್ಲಿ ಅವರ ಹೆಸರು ನಮೂದಿಸುವ ಕಾರ್ಯ ತ್ವರಿತಗೊಳಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು ಎಂದು ಸಿಎಂ ಹೇಳಿದರು.

ಬ್ಯಾಕ್‍ಲಾಗ್, ಮುಂಭಡ್ತಿ ಪರಿಶೀಲನೆ :

ಎಲ್ಲ ಇಲಾಖೆಗಳೂ ಬಡ್ತಿಯಲ್ಲಿ ಮೀಸಲಾತಿಯನ್ನು ತಪ್ಪದೆ ಪಾಲಿಸಬೇಕು. ಪರಿಶಿಷ್ಟ ಸಮುದಾಯದವರಿಗೆ ಅವಕಾಶ ತಪ್ಪಿಸಲು ಅಧಿಕಾರಿಗಳು ಕುಟಿಲ ನೀತಿ ಅನುಸರಿಸಿದರೆ ಸಹಿಸುವುದಿಲ್ಲ. ಬ್ಯಾಕ್‍ಲಾಗ್, ನೇಮಕಾತಿ ಮತ್ತು ಮುಂಬಡ್ತಿ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಇಲಾಖೆವಾರು ಪ್ರತ್ಯೇಕ ಸಭೆ ನಡೆಸಲು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

Leave A Reply

Your email address will not be published.