EBM News Kannada
Leading News Portal in Kannada

ಮೈಸೂರು: ಪತ್ನಿಯನ್ನು ಹೆರಿಗೆಗೆ ದಾಖಲಿಸಿ ಕೊರೆಯುವ ಚಳಿಯಲ್ಲಿ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ಪತಿ ಮೃತ್ಯು

0


ಮೈಸೂರು: ಗರ್ಭಿಣಿ ಪತ್ನಿಯನ್ನು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಿಸಿ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ವ್ಯಕ್ತಿ ಪತಿ ಮಲಗಿದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮ ನಿವಾಸಿ ನಾಗೇಶ್ (47) ಮೃತಪಟ್ಟ ವ್ಯಕ್ತಿ. ನಾಗೇಶ್ ರವಿವಾರ ರಾತ್ರಿ 10:30ರ ಸುಮಾರಿಗೆ ಆಸ್ಪತ್ರೆಯ ಹೊರ ಆವರಣದಲ್ಲಿ ಮಲಗಿದ್ದರು. ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಗಮನಿಸಿದಾಗ ಅವರು ಮಲಗಿದಲ್ಲೇ ಮೃತಪಟ್ಟಿದ್ದರೆನ್ನಲಾಗಿದೆ. ನಗರದಲ್ಲಿ ಕೆಲವು ದಿನಗಳಿಂದ ಕೊರೆಯುವ ಚಳಿಯಿದ್ದು, ಚಳಿ ತಡೆಯಲಾರದೆ ಮೃತಪಟ್ಟಿರುವ ಬಗ್ಗೆ ಮನೆಮಂದಿ ಶಂಕೆ ವ್ಯಕ್ತಪಡಿಸಿದ್ದಾರೆ.

ನಾಗೇಶ್ ತನ್ನ ಪತ್ನಿಯನ್ನು ಹೆರಿಗೆಗೆಂದು ಶುಕ್ರವಾರ ಗುಂಡ್ಲುಪೇಟೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ವೈದ್ಯರು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅದರಂತೆ ನಾಗೇಶ್ ಅವರು ಪತ್ನಿಯನ್ನು ಚೆಲುವಾಂಬ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದ್ದು, ಶನಿವಾರ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ನಡುವೆ ಕಳೆದ ಮೂರು ರಾತ್ರಿಯೂ ನಾಗೇಶ್ ಆಸ್ಪತ್ರೆಯ ಹೊರ ಆವರಣದಲ್ಲಿ ಚಾಪೆ ಹಾಸಿ ಮಲಗುತ್ತಿದ್ದರೆನ್ನಲಾಗಿದೆ. ಹಾಗೆ ರವಿವಾರ ರಾತ್ರಿ ಆಸ್ಪತ್ರೆಯ ಹೊರಗಡೆ ಮಲಗಿದ್ದ ನಾಗೇಶ್ ಸೋಮವಾರ ಬೆಳಗ್ಗೆ ಗಮನಿಸಿದಾಗ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ನಾಗೇಶ್ ಮದ್ಯಪಾನದ ಚಟ ಕೂಡಾ ಹೊಂದಿದ್ದರೆನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಸುಧಾ, ನಾಗೇಶ್ ಗಂಭೀರ ಪ್ರಕರಣ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಪತ್ನಿಯನ್ನು ನಮ್ಮ ಆಸ್ಪತ್ರೆಗೆ ಶುಕ್ರವಾರ ಕರೆ ತಂದಿದ್ದರು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಶನಿವಾರ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಧ್ಯೆ ಪತ್ನಿ ಜೊತೆ ನಾಗೇಶ್ ಒಬ್ಬರೇ ಬಂದಿದ್ದು, ಆಸ್ಪತ್ರೆ ಆವರಣದಲ್ಲೇ ಮಲಗಿದ್ದರು. ಸೋಮವಾರ ಬೆಳಗ್ಗೆ ನೋಡಿದಾಗ ಅವರು ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಸಾವಿನ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗೆ ಬರುವವರಿಗೆ ತಂಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಅಲ್ಲಿ ಉಚಿತವಾಗಿ ತಂಗಲು ಅವಕಾಶ ಮಾಡಿಕೊಡಲಾಗಿದೆ. ಬಿಪಿಎಲ್ ಪಡಿತರ ಚೀಟಿ ಇಲ್ಲದವರಿಗೆ 30 ರೂ. ಚಾರ್ಚ್ ಮಾಡಲಾಗುತ್ತಿದೆ. ಆದರೆ ಹೆಚ್ಚಿನ ಜನರು ಈ ಕೊಠಡಿ ವ್ಯವಸ್ಥೆಯನ್ನು ಬಳಸಿಕೊಳ್ಳದೆ ಹೊರಗಡೆಯಲ್ಲೇ ಮಲಗುತ್ತಾರೆ. ಈ ವೇಳೆ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನೈಜ ಕಾರಣ ತಿಳಿದು ಬರಲಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಸುಧಾ ತಿಳಿಸಿದ್ದಾರೆ.

Leave A Reply

Your email address will not be published.