EBM News Kannada
Leading News Portal in Kannada

ಬಿಲ್ ಬಾಕಿ | ಡಿಕೆಶಿ, ಝಮೀರ್ ಸೇರಿದಂತೆ 7 ಸಚಿವರಿಗೆ ಗುತ್ತಿಗೆದಾರರ ಸಂಘದಿಂದ ಪತ್ರ

0


ಬೆಂಗಳೂರು: ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಬಗ್ಗೆ ಸರಕಾರ ಸ್ಪಂದಿಸದಿರುವ ಕುರಿತು ಕರ್ನಾಟಕ ರಾಜ್ಯ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ್ ಬಿ.ಶೇಗಜಿ ಏಳು ಸಚಿವರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರದ 7 ಮಂದಿ ಸಚಿವರಿಗೆ ಪತ್ರ ಬರೆದಿದ್ದು, ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್, ಸಚಿವ ಬೋಸರಾಜು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ರಹೀಂಖಾನ್‍ಗೆ ಅವರಿಗೆ ಪತ್ರ ಬರೆದು ಸಮಾಧಾನ ಹೊರಹಾಕಿದ್ದಾರೆ.

ಗುತ್ತಿಗೆದಾರರ ಕುಂದು-ಕೊರತೆಗಳ ಬಗ್ಗೆ ಹಾಗೂ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಹಲವು ಬಾರಿ ಸರಕಾರದ ಗಮನಕ್ಕೆ ತಂದಿರುತ್ತೇವೆ. ಆದರೆ ತಾವುಗಳು ಇದುವರೆಗೂ ನಮಗೆ ಯಾವುದೇ ಪತ್ರ ಸಹ ಬರೆದಿಲ್ಲ. ಹೀಗಾಗಿ, ಗುತ್ತಿಗೆದಾರರ ಸಭೆ ಕರೆದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮ ಇಲಾಖೆಯ ಅಧಿಕಾರಿಗಳನ್ನು ನಾವು ಕೇಳಿದರೆ, ಹಣ ಪಾವತಿಯಾಗಲಿ ಬೇರೆ ವಿಷಯದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಮಂತ್ರಿಗಳನ್ನು ಭೇಟಿ ಮಾಡಿ ಎಂದು ಹೇಳುತ್ತಾರೆ. ಹಣ ಪಾವತಿಸುವ ವಿಷಯದಲ್ಲಿ ಸಚಿವರು ಕೊಟ್ಟ ಪಟ್ಟಿಯ ಪ್ರಕಾರ ಜೇಷ್ಠತೆಯನ್ನು ಕಡೆಗಣಿಸಿ ಪಾವತಿಸುವಂತೆ ಸೂಚಿಸಿರುತ್ತಾರೆ. ಹೀಗೆ ಮಾಡಿದರೆ ನಮ್ಮ ಎಲ್ಲ ಗುತ್ತಿಗೆದಾರರಿಗೂ ಅನ್ಯಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ನಾವು ಈ ಹಿಂದಿನ ಸರಕಾರದ ವಿರುದ್ಧ ಹೋರಾಟ ಮಾಡಿರುವ ಬಗ್ಗೆ ತಮಗೆ ತಿಳಿದಿದೆ. ಆದ್ದರಿಂದ ತಮಗೆ ನಮ್ಮ ಸಂಘದ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲ ಎಂದು ಅನಿಸುತ್ತದೆ. ಈ ರೀತಿ ನಮ್ಮನ್ನು ಕಡೆಗಣಿಸುತ್ತೀರಿ ಎಂದು ನಾವು ಕನಸಿನಲ್ಲೂ ಭಾವಿಸಿರಲಿಲ್ಲ. ಈ ಪತ್ರ ತಲುಪಿ 7 ದಿನದೊಳಗೆ ನಮ್ಮ ಸಂಘದ ಸಭೆ ಕರೆದು ನಮಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗುತ್ತದೆ. ಮುಂದೆ ಹೋರಾಟದ ಹಾದಿ ಹಿಡಿಯಲು ನಾವು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.