EBM News Kannada
Leading News Portal in Kannada

ಪ್ರತಿಪಕ್ಷಗಳು ರಾಜ್ಯ ಸರಕಾರದ ಮೇಲೆ ಇಲ್ಲಸಲ್ಲದ ಕಥೆಗಳನ್ನು ಹೆಣೆಯುತ್ತಿವೆ : ಸುರ್ಜೇವಾಲಾ

0


ಬೆಂಗಳೂರು: ತಮ್ಮ ದುಷ್ಕೃತ್ಯಗಳು ಮತ್ತು ವೈಫಲ್ಯಗಳನ್ನು ಮರೆಮಾಚುವ ಪ್ರಯತ್ನದಲ್ಲಿ ಪ್ರತಿಪಕ್ಷಗಳು, ಕಾಂಗ್ರೆಸ್ ಮತ್ತು ಅದರ ಗ್ಯಾರಂಟಿಗಳ ಮೇಲೆ ದಾಳಿ ಮಾಡಲು ಕಥೆಗಳನ್ನು ಹೆಣೆಯುತ್ತಿವೆ. ಅವರು ಕೇವಲ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಥವಾ ಕಾಂಗ್ರೆಸ್ ಸರಕಾರವನ್ನು ಗುರಿಯಾಗಿಸಿಕೊಂಡಿಲ್ಲ. ವಾಸ್ತವದಲ್ಲಿ ಕರ್ನಾಟಕದ ಜನರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಮತ್ತು ಕರ್ನಾಟಕದ ಜನತೆಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಡೆಸುವ ಪ್ರತಿಯೊಂದು ದುರುದ್ದೇಶಪೂರಿತ ನಡೆಯನ್ನು ನಾವು ಎದುರಿಸುತ್ತೇವೆ ಎಂದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಾಣೆ ಕುರಿತು ವ್ಯಾಪಕ ಊಹಾಪೋಹಗಳು ಕೇಳಿಬರುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಸರಕಾರವು ಒಗ್ಗಟ್ಟಾಗಿದೆ ಮತ್ತು ಪ್ರತಿಪಕ್ಷಗಳು ಸರಕಾರದ ಮೇಲೆ ಇಲ್ಲಸಲ್ಲದ ಕಥೆಗಳನ್ನು ಹೆಣೆಯುತ್ತಿವೆ. ಬಿಜೆಪಿಯೊಳಗೆ ಮತ್ತು ಜೆಡಿಎಸ್‍ನೊಂದಿಗಿನ ಮೈತ್ರಿಯಲ್ಲಿ ಭಿನ್ನಾಭಿಪ್ರಾಯವಿದೆ. ಕಾಂಗ್ರೆಸ್‍ನೊಳಗಿನ ಅಧಿಕಾರದ ಗುದ್ದಾಟ ಕೇವಲ ಮಾಧ್ಯಮ ಸೃಷ್ಟಿ ಎಂದು ಸುರ್ಜೇವಾಲಾ ತಿಳಿಸಿದರು.

ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಘರ್ಷಣೆಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು ಕೆಲವು ಆಯ್ದ ಸುದ್ದಿ ವಾಹಿನಿಗಳು, ಪ್ರತಿ ಕನ್ನಡಿಗರ ಕುಟುಂಬಕ್ಕೆ ನೇರ ನಗದು ವರ್ಗಾವಣೆ ಮಾಡುತ್ತಿರುವ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸುತ್ತಿವೆ. ಕಾಂಗ್ರೆಸ್ ಸರಕಾರ ನೇರವಾಗಿ ಜನರಿಗೆ 58 ಸಾವಿರ ಕೋಟಿ ರೂ.ಗಳನ್ನು ನೀಡುತ್ತಿದೆ ಎಂದು ಸುರ್ಜೇವಾಲಾ ಹೇಳಿದರು.

ರಾಜ್ಯದ ಸರಕಾರದ ಖಾತರಿ ಯೋಜನೆಯು ಭಾರತದ ಅತಿದೊಡ್ಡ ಕಲ್ಯಾಣ ಉಪಕ್ರಮವಾಗಿದ್ದು, ಸ್ವಾಭಾವಿಕವಾಗಿ ಬಿಜೆಪಿಯು ಇದರಿಂದ ವಿಚಲಿತವಾಗಿದೆ. ರಾಜ್ಯದಲ್ಲಿ ಕೇಸರಿ ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿದ್ದು, ಬಿಜೆಪಿ ಮತ್ತು ಅದರ ಮೈತ್ರಿ ಪಾಲುದಾರ ಜೆಡಿಎಸ್ ಜಿದ್ದಾಜಿದ್ದಿಯಲ್ಲಿ ತೊಡಗಿವೆ ಎಂದು ಸುರ್ಜೇವಾಲಾ ದೂರಿದರು.

ಪಕ್ಷದಲ್ಲಿ ಯಾವುದೇ ಒಡಕಿಲ್ಲ: ‘ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಒಡಕಿಲ್ಲ. ಸಿಎಂ ಮತ್ತು ಡಿಸಿಎಂ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ವಿಪಕ್ಷಗಳ ಆಧಾರ ರಹಿತ ಆರೋಪಗಳಿಗೆ ನಾವು ಕಿವಿಗೊಡುವುದಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದರು.

Leave A Reply

Your email address will not be published.