EBM News Kannada
Leading News Portal in Kannada

ಸಿ.ಟಿ.ರವಿ ಬಹಿರಂಗ ಕ್ಷಮೆಯಾಚಿಸದಿದ್ದರೆ ಜೆಡಿಎಸ್-ಬಿಜೆಪಿ ಮೈತ್ರಿ ಮೇಲೆ ಪರಿಣಾಮ: ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಎಚ್ಚರಿಕೆ

0


ಬೆಂಗಳೂರು: ‘ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕೆಟ್ಟ ಪದ ಬಳಕೆ ಅಕ್ಷಮ್ಯ ಅಪರಾಧ. ಸಿ.ಟಿ.ರವಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಈ ಪ್ರಕರಣದಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮೇಲೆ ಪರಿಣಾಮ ಬೀರಲಿದೆ’ ಎಂದು ಗುರುಮಿಠಕ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಎಚ್ಚರಿಸಿದ್ದಾರೆ.

ಶನಿವಾರ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಸಿ.ಟಿ.ರವಿ ಪರಿಷತ್ ಕಲಾಪದಲ್ಲೇ ಕೆಟ್ಟ ಪದ ಬಳಕೆ ಮಾಡಿರುವುದು ಅಪರಾಧ. ಇದು ಸ್ತ್ರೀ ಕುಲಕ್ಕೆ ಮಾಡಿದ ಅಪಮಾನ ಎಂದು ನಾನು ಭಾವಿಸುತ್ತೇನೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಹೆಣ್ಣನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಹೀಗಾಗಿ ಸಿ.ಟಿ.ರವಿ ಅವರು ತಾವು ಬಳಸಿದ ಪದವನ್ನು ವಾಪಸ್ ಪಡೆದು, ಈ ಕೂಡಲೇ ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಜೆಡಿಎಸ್-ಬಿಜೆಪಿ ಮೈತ್ರಿಕೂಟದಲ್ಲಿ ಪಾಲುದಾರರಾಗಿರುವುದರಿಂದ ಜನ ನಮ್ಮನ್ನೂ ಪ್ರಶ್ನೆ ಮಾಡುತ್ತಾರೆ. ಹೀಗಾಗಿ ನಾವು ಸಿ.ಟಿ.ರವಿ ಅವರ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದ ಶರಣಗೌಡ ಕಂದಕೂರು. ಇದು ರಾಜಕಾರಣದ ಅಥವಾ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತಾದ ಪ್ರಶ್ನೆಯಲ್ಲ. ಪ್ರಕರಣದ ಬಗ್ಗೆ ನಾಳೆ ಜನ ನಮ್ಮನ್ನು ಪ್ರಶ್ನೆ ಮಾಡಿದರೆ ನಾವೇನು ಉತ್ತರ ಕೊಡಬೇಕು ಎಂಬ ಬಗ್ಗೆ ನಾವೂ ಯೋಚಿಸಬೇಕಾಗುತ್ತದೆ. ಈ ಕಾರಣಕ್ಕೆ ನಾನು ಸಿ.ಟಿ.ರವಿ ಅವರಿಂದ ಕ್ಷಮಾಪಣೆಯ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ಶರಣಗೌಡ ಕಂದಕೂರು ಅವರ ಹೇಳಿಕೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಆಡಳಿತಾರೂಢ ಕಾಂಗ್ರೆಸ್, ‘ಪಕ್ಷಾತೀತವಾಗಿ ತಮ್ಮ ಅಭಿಪ್ರಾಯ ಹೊರಹಾಕಿರುವ ಕಂದಕೂರರ ಹೇಳಿಕೆಯನ್ನು ಬಿಜೆಪಿ-ಜೆಡಿಎಸ್ ನಾಯಕರು ಗಮನಿಸಬೇಕು’ ಎಂದು ಆಗ್ರಹಿಸಿದೆ.



Leave A Reply

Your email address will not be published.