EBM News Kannada
Leading News Portal in Kannada

ಬೆಳಗಾವಿ ಅಧಿವೇಶನ | ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕ ಅಂಗೀಕಾರ

0


ಬೆಳಗಾವಿ : ವಿಧಾನಸಭೆಯಿಂದ ಅಂಗಿಕೃತ ರೂಪದಲ್ಲಿರುವ 2024ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕವು ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕೃತವಾಯಿತು.

ಈ ವೇಳೆ ವಿಧಾನ ಪರಿಷತ್ತಿನ ವಿಪಕ್ಷ ಸದಸ್ಯರಾದ ತಳವಾರ ಸಾಬಣ್ಣ, ಕೇಶವ ಪ್ರಸಾದ್, ಹೇಮಲತಾ ನಾಯಕ ಹಾಗೂ ಇತರರು ಮಾತನಾಡಿ, ನೂತನವಾದ ಈ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿತವಾಗಬೇಕು. ಅನುದಾನ ಸದ್ಬಳಕೆಯ ವಿಷಯದಲ್ಲಿ ಮೇಲ್ಪಂಕ್ತಿ ಹಾಕಬೇಕು. ಕೆಕೆಆರ್‍ಡಿಬಿಯಿಂದ ಈ ವಿವಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹಂತಹಂತವಾಗಿ ಕೆಲ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ ವಿಶ್ವವಿದ್ಯಾಲಯವನ್ನು ಬಲಪಡಿಸಲು ನಾನಾ ಕ್ರಮಗಳ ಪ್ರಕ್ರಿಯೆ ನಡೆಸಲು ಸರಕಾರವು ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರು ಸದನಕ್ಕೆ ತಿಳಿಸಿ, ತಿದ್ದುಪಡಿಗೆ ಅನುಮೋದನೆ ನೀಡಬೇಕು, ವಿಧೇಯಕವನ್ನು ಅಂಗೀಕರಿಸಬೇಕು ಎಂದು ಕೋರಿದರು. ಬಳಿಕ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

Leave A Reply

Your email address will not be published.