ಗದಗ (ರೋಣಾ) : ನಮ್ಮ ಸರಕಾರ ಜಾರಿ ಮಾಡಿರುವ ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳಿಗೆ ಬಿಜೆಪಿ-ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿದರು.
ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ 200 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ, ಸಿರಿ ದಾನ್ಯ ಉತ್ಪಾದನೆಯ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1,20,000 ಕೋಟಿ ಹಣವನ್ನು ಈ ವರ್ಷ ರಾಜ್ಯ ಸರಕಾರ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಇದಲ್ಲದೆ 52000 ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ ಹಾಕುತ್ತಿದ್ದೇವೆ. ಹೀಗಿದ್ದೂ ಬಿಜೆಪಿ ಬುರುಡೆ ಬಿಡುತ್ತಿದೆ. ರಾಜ್ಯ ಸರಕಾದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಪದೇ ಪದೇ ಸುಳ್ಳು ಹೇಳಿ ಅವರ ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ರಾಜ್ಯದ ಜನತೆ ಇವರ ಸುಳ್ಳು ನಂಬುವಷ್ಟು ಮೂರ್ಖರಲ್ಲ ಎಂದರು.
ರಾಜ್ಯದ 4.5 ಕೋಟಿ ಮಂದಿ ಗ್ಯಾರಂಟಿ ಯೋಜನೆಗಳ ನೇರ ಲಾಭ ಪಡೆಯುತ್ತಿದ್ದಾರೆ. ಇದಲ್ಲದೆ ರಸ್ತೆ, ನೀರು, ಕೃಷಿ, ನೀರಾವರಿ ಯೋಜನೆಗಳಿಗೂ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದೇವೆ. ಸಮಾಜ ಕಲ್ಯಾಣಕ್ಕೆ, ದಲಿತ ಸಮುದಾಯದ ಪ್ರಗತಿಗೆ, ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಸಾವಿರ ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಆದರೆ ಬಿಜೆಪಿ ಜಾತಿ-ಧರ್ಮದ ನಡುವೆ ದ್ವೇಷ ಹರಡಿ, ಜನರನ್ನು ವಿಭಜಿಸುವ ಏಕೈಕ ರಾಜಕಾರಣದಲ್ಲಿ ತೊಡಗಿದೆ ಎಂದರು.
ಬಸವಣ್ಣ, ಅಂಬೇಡ್ಕರ್, ಗಾಂಧಿ, ಬುದ್ಧ ಎಲ್ಲರ ಆಶಯದಂತೆ ಸಮ ಸಮಾಜವನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನು ನಮ್ಮ ಸರಕಾರ ರೂಪಿಸಿ, ಜಾರಿ ಮಾಡುತ್ತಿದೆ. ಆದರೆ ಸಮಾಜದಲ್ಲಿರುವ ಅಸಮಾನತೆಯ ಅತಿಹೆಚ್ಚು ಲಾಭ ಪಡೆಯುತ್ತಿರುವ ಬಿಜೆಪಿ, ಸಮಾನತೆಯ ವಿರೋಧಿಯಾಗಿದೆ ಎಂದರು.
ಇಡೀ ಜಗತ್ತಿನಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಹೆಚ್ಚಿನ ನಾರಿನ ಅಂಶ ಇರುವ ಸಿರಿದಾನ್ಯ ಬಳಸುವುದರಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ದೇಹಕ್ಕೆ ಅಗತ್ಯವಾದ ಪ್ರೋಟೋನ್ ಹೇರಳವಾಗಿ ಸಿಗುತ್ತದೆ. ಆದ್ದರಿಂದ ರಾಜ್ಯ ಸರಕಾರ ಸಿರಿದಾನ್ಯ ಬೆಳೆಯುವ ರೈತರಿಗೆ ನಾನಾ ರೀತಿಯ ಅನುಕೂಲ ಮಾಡಿಕೊಡುತ್ತಿದೆ ಎಂದರು.