ಸಾಗರ: ಜೋಗಕ್ಕೆ ದ.ಕ. ಜಿಲ್ಲೆಯ ಬಿ.ಸಿ.ರೋಡ್ ನಿಂದ ಪ್ರವಾಸ ಬಂದಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ಇಲ್ಲಿನ ಜೋಗ-ಕಾರ್ಗಲ್ ಸಮೀಪದ ಅರಳಗೋಡು ರಸ್ತೆ ತಿರುವಿನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಘಟನೆಯಲ್ಲಿ ಬಸ್ಸಿನಲ್ಲಿದ್ದ 20ಕ್ಕೂ ಅಧಿಕ ಮಂದಿಗೆ ತೀವ್ರತರದ ಗಾಯಗಳಾಗಿವೆ. ಗಾಯಾಳುಗಳನ್ನು ಕಾರ್ಗಲ್ ಆಸ್ಪತ್ರೆಗೆ ಹಾಗೂ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಬಸ್ಸಿನಲ್ಲಿ ಸುಮಾರು 55 ಪ್ರಯಾಣಿಕರಿದ್ದು, ಇವರು ಬಿ.ಸಿ.ರೋಡ್ ನಿಂದ ಟೂರಿಸ್ಟ್ ಪ್ಯಾಕೇಜ್ ನಲ್ಲಿ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಅರಳಗೋಡು ತಿರುವಿನಲ್ಲಿ ಇಂದು ಮಧ್ಯಾಹ್ನ 1:30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಉರುಳಿಬಿದ್ದಿದೆ. ಇದರಿಂದ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರ್ಗಲ್ ಸಾದಿಕ್ ಮತ್ತವರ ಸ್ನೇಹಿತರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಆಸ್ಪತ್ರೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.