EBM News Kannada
Leading News Portal in Kannada

ವಾರಕ್ಕೆ ಲಕ್ಷ ರೂ. ಆಸ್ಪತ್ರೆ ಖರ್ಚು: ಹೊಲ ಮಾರಿಯಾದರೂ ತಾಯಿಯನ್ನು ಉಳಿಸಬೇಕು ಎಂದುಕೊಂಡಿದ್ದೆವು…

0


ಬೆಂಗಳೂರು: ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೊರೋನ ವೈರಸ್ ಗಿಂತಲೂ ವೈದ್ಯಕೀಯ ವೆಚ್ಚ ಭರಿಸುವುದೇ ಅತಿ ದೊಡ್ಡ ಸಮಸ್ಯೆಯಾಗಿತ್ತು. ಈ ಅವಧಿಯಲ್ಲಿ ಹಲವರು ತಮ್ಮ ಸಂಬಂಧಿಕರು, ಆಪ್ತರನ್ನು ಕಳೆದುಕೊಂಡಿದ್ದಾರೆ. ಹೀಗೆ ತಮ್ಮ ತಾಯಿಯನ್ನು ಕಳೆದುಕೊಂಡವರಲ್ಲಿ ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ನಜ್ಜಾ ತನ್ನ ಅಳಲು ‘ವಾರ್ತಾಭಾರತಿ’ಯೊಂದಿಗೆ ಹಂಚಿ ಕೊಂಡಿದ್ದಾರೆ.

2021 ರಲ್ಲಿ ಕೋವಿಡ್-19ಗೆ ಬಲಿಯಾದ ನಜ್ಜಾ ಅವರ ತಾಯಿಯು ಒಂಟಿ ಜೀವನ ನಡೆಸುತ್ತಿದ್ದ ರೈತ ಮಹಿಳೆಯಾಗಿದ್ದರು. ದಿನನಿತ್ಯದಂತೆ ಅವರು ಹೊಲದಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಕಾಲಿಗೆ ಚುಚ್ಚಿದ ಮುಳ್ಳಿನಿಂದಲೇ ತನಗೆ ಜ್ವರ ಬಂದಿದೆ ಎಂದುಕೊಂಡಿದ್ದರು. ಅವರು ಹೀಗೆಯೇ ವೈದ್ಯರ ಸಲಹೆ ಮೇರೆಗೆ ಕೊರೋನ ಪರೀಕ್ಷೆಗೊಳಪಟ್ಟಾಗ ಪಾಸಿಟಿವ್ ಎಂದು ವರದಿ ಬಂದಿತ್ತು.

ಆ ಸಮಯಕ್ಕೆ ಆಗಲೇ ಟಿವಿಯಲ್ಲಿ ತೋರಿಸುತ್ತಿದ್ದ ಕೊರೋನ್ ವೈರಸ್ನ ಭೀಕರತೆ, ಸತ್ತವರ ಮೃತದೇಹಗಳನ್ನು ಒಂದೇ ಗುಂಡಿಯಲ್ಲಿ ಮಣ್ಣು ಮಾಡುವುದು, ತಮ್ಮ ಕೆಲವು ಸಂಬಂಧಿಕರೇ ಈ ರೋಗಕ್ಕೆ ತುತ್ತಾಗಿ ದ್ದು, ಮುಂತಾದ ವಿಷಯಗಳಿಂದ ತಾಯಿಯು ಮೊದಲೇ ಭಯಭೀತರಾಗಿದ್ದರು ಎಂದು ಅವರ ಪುತ್ರಿ ನಜ್ಜಾ ಅವರು ಹೇಳುತ್ತಾರೆ.

ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ತಾಯಿಯನ್ನು ಗಂಗಾವತಿಯಲ್ಲಿರುವ ತನ್ನ ಮಗಳು ಕರೆದುಕೊಂಡು ಹೋಗಿ ಆರೈಕೆ ಮಾಡಿದರು. ಕೆಲವೇ ದಿನಗಳ ನಂತರ ಅವರಿಗೂ, ಅವರ ಮಕ್ಕಳಿಗೂ ಕೊರೋನ ವ್ಯಾಪಿಸಿತು. ಹಾಗಾಗಿ ಕುಟುಂಬದ ಭವಿಷ್ಯದ ಕುರಿತು ಮಗಳ ಗಂಡ ಭಯಪಟ್ಟ ಕಾರಣ 15ರಿಂದ 20 ದಿನಗಳ ನಂತರ ತಾಯಿಯು ಕಡೂರಿನಲ್ಲಿರುವ ಮತ್ತೊಬ್ಬ ಮಗಳ ಮನೆಗೆ ಹೋಗಿ ಆಶ್ರಯ ಪಡೆಯಬೇಕಾಯಿತು. ಅವರೂ ಕೂಡ ತಾಯಿಯನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ಆದರೆ ತಾಯಿಯ ಆರೋಗ್ಯ ಅದಾಗಲೇ ಕ್ಷೀಣಿಸುತ್ತಾ ಸಾಗಿ ತ್ತು ಎಂದು ತನ್ನ ತಾಯಿಯು ಕಳೆದ ಅಂತಿಮ ದಿನಗಳನ್ನು ನೆನೆದು ನಜ್ಜಾ ದುಃಖತರಾಗುತ್ತಾರೆ.

ಕೈಮೀರಿದ ವೈದ್ಯಕೀಯ ವೆಚ್ಚ: ತಾಯಿಯೊಬ್ಬರಿಗಾಗಿಯೇ ಚಿಕಿತ್ಸೆ ಕೊಡಿಸಲು ಪ್ರತೀ ವಾರ ಒಂದು ಲಕ್ಷದಷ್ಟು ಆಸ್ಪತ್ರೆಯ ಖರ್ಚು ತಗಲುತ್ತಿತ್ತು. ನಾವು ಮಕ್ಕಳೆಲ್ಲ ಸೇರಿ ಕೈಲಾದಷ್ಟು ಹಣ ಕೂಡಿಸುತ್ತಿದ್ದೆವು. ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಹೀಗೆ ವೆಚ್ಚ ಭರಿಸುವುದು ಹೇಗೆ ಸಾಧ್ಯ?. ಹಾಗಾಗಿ ಕೊನೆಗೆ ಹೊಲ ಮಾರಿಯಾದರೂ ತಾಯಿಯನ್ನು ಉಳಿಸಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದೆವು ಎನ್ನುತ್ತಾರೆ ನಜ್ಜಾ.

ಅಮಾನವೀಯತೆ ಮೆರೆದ ಸರಕಾರ:

ಮುಸ್ಲಿಮ್ ಸಮುದಾಯದಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನಕ್ಕೆ ವಿಶೇಷ ಆದ್ಯತೆ ಇರುವುದರಿಂದ ತಾಯಿ, ಅದರ ಬಗ್ಗೆಯೂ ಆತಂಕ ಹೊಂದಿದ್ದರು. ಅದರಂತೆಯೇ ಅವರ ಅಂತಿಮ ಸಂಸ್ಕಾರ ಮಾಡಿಸಲು ಯಾರು ಮುಂದೆ ಬರಲಿಲ್ಲ. ನಾವು ಕೇಳಿಕೊಂಡರೆ ಸರಕಾರದಿಂದ ಅನುಮತಿ ತಂದರೆ ಮಾಡಿಸುತ್ತೇವೆ ಎಂದು ಹೇಳಿದರು. ಆದರೆ ಆ ಸಮಯಕ್ಕೆ ಅದು ಸಾಧ್ಯವಿರದ ಕಾರಣ ನಾದೇ ಅಕ್ಕ ತಂಗಿಯರು ಪಿಪಿಇ ಕಿಟ್ ಧರಿಸಿ ಅಂತಿಮ ವಿಧಿ ವಿಧಾನ ನೆರವೇರಿಸಿದೆವು. ಕೊರೋನ ಅವಧಿಯಲ್ಲಿ ಸರಕಾರ ನಮಗೆ ಯಾವ ರೀತಿಯಿಂದಲೂ ನೆರವಿಗೆ ಬಂದಿಲ್ಲ. ‘ಸುಮ್ಮನೆ ಕೇಳಿದರೆ ಯಾವ ಸರಕಾರವು ಕೊಡುವುದಿಲ್ಲ ಸಾರ್. ನಮ್ಮ ಹಕ್ಕನ್ನು ನಾವು ಕಿತ್ತುಕೊಳ್ಳಬೇಕು. ಗಾಂಧೀಜಿಯವರು ಕೂಡ ಹೋರಾಡಿಯೇ ಅಲ್ಲದೇ ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದು’ ಎಂದು ಹೇಳುತ್ತಾರೆ.

ಮುಟ್ಟಬೇಡ, ದೂರ ಹೋಗು ಎಂದರು !

ಅಮ್ಮನ ದೇಹ ತುಂಬಾ ಕ್ಷೀಣವಾದಂತೆ ಕಂಡು ಬಂತು. ಮೈಮುಟ್ಟಿ ನೋಡಲು ಹೋದರೆ ‘ನನ್ನನ್ನು ಮುಟ್ಟಬೇಡ. ನಿಮಗೆ ಮಕ್ಕಳು ಮರಿ ಇದ್ದಾವೆ. ನಿಮಗೂ ಈ ರೋಗ ಬರಬಹುದು’ ಎಂದು ಹೇಳುತ್ತಿದ್ದರು. ನನ್ನ ತಾಯಿಗೆ ನಮ್ಮ ಅಣ್ಣ ಎಂದರೆ ತುಂಬಾ ಪ್ರೀತಿ. ಅವನನ್ನು ಮತ್ತೆ-ಮತ್ತೆ ಕೇಳುತ್ತಲೇ ಇದ್ದರು. ಆದರೆ ಅಣ್ಣನಿಗೆ ಆ ಸಂದರ್ಭದಲ್ಲಿ ಜಾರಿಯಲ್ಲಿದ್ದ ಕ್ವಾರಂಟೈನ್ ನಿಯಮಗಳ ಕಾರಣ ಅಲ್ಲಿಂದ ಬರುವ ಹಾಗಿರಲಿಲ್ಲ. ಕೊನೆಗೆ ತೀರ ಕ್ಷೀಣಿಸಿದ ಅವರು ಪ್ರಾಣ ಕಳೆದುಕೊಂಡರು ಎಂದು ತಾಯಿಯನ್ನು ಕಳೆದುಕೊಂಡ ನಜ್ಜಾ ಅವರು ನೋವು ಹೊರ ಹಾಕಿದರು.

Leave A Reply

Your email address will not be published.