EBM News Kannada
Leading News Portal in Kannada

ಬಸವಣ್ಣ, ಬುದ್ಧನ ನಂತರ ಸಮಾನತೆಗೆ ಹೋರಾಡಿದವರು ಅಂಬೇಡ್ಕರ್ : ಸಿಎಂ ಸಿದ್ದರಾಮಯ್ಯ

0


ಬೆಂಗಳೂರು : ದೇಶದಲ್ಲಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಧಾನಸೌಧದ ಮುಂಭಾಗ ಇರುವ ಸಂವಿಧಾನಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಪುಷ್ಪಾರ್ಚನೆ ಮೂಲಕ ಅವರನ್ನು ಗೌರವಿಸುವ ಕೆಲಸವನ್ನು ಸರಕಾರ ಮಾಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1956 ಡಿಸೆಂಬರ್ 6 ರಂದು ನಮ್ಮನ್ನೆಲ್ಲಾ ಅಗಲಿದರು. ಆ ದಿನವನ್ನೇ ಪರಿನಿರ್ವಾಣ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದರು

ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನ ನೀಡಿದ್ದಾರೆ :

ಅಂಬೇಡ್ಕರ್ ತಮ್ಮ ಬದುಕನ್ನು ಸಾಮಾಜಿಕ ಹೋರಾಟದಲ್ಲಿ ಹಾಗೂ ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡರು. ಅಂಬೇಡ್ಕರ್ ಅವರು ಈ ದೇಶಕ್ಕೆ ಹಾಗೂ ನಮ್ಮ ಸಾಮಾಜಿಕ ಬದುಕಿಗೆ ಅಗತ್ಯವಾದಂತಹ ಸಂವಿಧಾನವನ್ನು ಕೊಟ್ಟಿದ್ದಾರೆ. ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನವೆಂದು ನಮ್ಮ ಸಂವಿಧಾನ ಖ್ಯಾತಿ ಪಡೆದಿದೆ . ಸಂವಿಧಾನದ ಶ್ರೇಷ್ಠತೆ ತಿಳಿಯಬೇಕಾದರೆ ಒಳ್ಳೆಯವರ ಕೈಯಲ್ಲಿ ಅನುಷ್ಠಾನವಾಗಬೇಕು. ಕೆಟ್ಟವರ ಕೈಗೆ ಹೋದರೆ ಕೆಟ್ಟದಾಗುತ್ತದೆ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಈ ದೇಶದ ಜನರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರು ಎಂದರು.

ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು :

ಅಂಬೇಡ್ಕರ್ ಎಲ್ಲರಿಗೂ ಸಾಮಾಜಿಕ ಅವಕಾಶಗಳನ್ನು ದೊರಕಿಸಲು ಶ್ರಮಿಸಿದರು. ಅವಕಾಶ ವಂಚಿತರು, ಶೋಷಣೆ, ಅನ್ಯಾಯಕ್ಕೆ, ಅವಮಾನಕ್ಕೆ, ದೌರ್ಜನ್ಯಕ್ಕೆ ಒಳಪಟ್ಟ ಎಲ್ಲಾ ಜನರ ಪರವಾಗಿ ಕೆಲಸ ಅವರು ಮಾಡಿದ್ದರು. ಸಂವಿಧಾನದಿಂದ ಅನುಕೂಲ ಪಡೆದವರು ಅವರ ಸೋದರ ಜನಾಂಗಗಳಿಗೆ ಸಹಾಯ ಮಾಡಬೇಕು. ಎಲ್ಲರೂ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕೆಂದು ಬಯಸಿದ್ದರು ಎಂದರು.

ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು :

ಭಾರತ ಬಹುಸಂಸ್ಕೃತಿಯ, ಬಹುತ್ವದ ದೇಶ. ಅನೇಕ ಜಾತಿ, ಧರ್ಮಗಳಿವೆ. ಅನೇಕ ಭಾಷೆಗಳೂ ಇವೆ. ಇದಕ್ಕೆ ಯೋಗ್ಯವಾದ ಸಂವಿಧಾನವನ್ನು ಕೊಟ್ಟವರು ಅಂಬೇಡ್ಕರ್. ಎಲ್ಲಾ ಧರ್ಮಗಳೂ, ಜಾತಿಗಳೂ ಸಮಾನವಾದುದು. ಮೂಲಭೂತವಾಗಿ ನಾವೆಲ್ಲಾ ಮನುಷ್ಯರು. ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು. ಇದನ್ನು ಅಂಬೇಡ್ಕರ್ ಅವರು ತಮ್ಮ ಬದುಕಿನಲ್ಲಿ ಸಾರಿದ್ದರು.

ಬಳ್ಳಾರಿಯಲ್ಲಿ ಬಾಣಂತಿ ಸಾವು: ಪರಿಶೀಲನೆ

ಬಳ್ಳಾರಿಯಲ್ಲಿ ಮತ್ತೊಂದು ಬಾಣಂತಿಯ ಸಾವಾಗಿರುವ ಬಗ್ಗೆ ಮಾತನಾಡಿ, ಈ ಬಗ್ಗೆ ಈಗಾಗಲೇ ಸಭೆ ನಡೆಸಿ ಡ್ರಗ್ಸ್ ಕಂಟ್ರೋಲರ್ ಅವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಸಾವು ಏಕೆ ಸಂಭವಿಸಿದೆ ಎಂದು ಪರಿಶೀಲಿಸಲಾಗುವುದು ಎಂದರು.

Leave A Reply

Your email address will not be published.