EBM News Kannada
Leading News Portal in Kannada

ʼಹೈಕೋರ್ಟ್ ಸಿಜೆ ಸಮಯಪಾಲನೆ ಮಾಡುತ್ತಿಲ್ಲʼ ಎಂದು ಸಿಜೆಐಗೆ ಪತ್ರ ಬರೆದ ವಕೀಲರ ಸಂಘ

0


ಬೆಂಗಳೂರು: ‘ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರು ಕೆಲವು ತಿಂಗಳುಗಳಿಂದ ಸರಕಾರ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಗಳಾಗುತ್ತಿದೆ’ ಎಂದು ಬೆಂಗಳೂರು ವಕೀಲರ ಸಂಘವು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿದೆ.

‘ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರು ಪ್ರತಿನಿತ್ಯ ಕೋರ್ಟ್ ಆರಂಭವಾಗುವ ಸಮಯವಾದ ಬೆಳಗ್ಗೆ 10.30ಕ್ಕೆ ನ್ಯಾಯಾಲಯವನ್ನು ಆರಂಭಿಸುತ್ತಿಲ್ಲ. ಅಲ್ಲದೆ, ಸಂಜೆ 4.45ಕ್ಕಿಂತ ಮುಂಚೆಯೇ ಕೆಲಸದಿಂದ ಹೊರಡುತ್ತಾರೆ. ಮುಖ್ಯ ನ್ಯಾಯಾಧೀಶರ ಈ ನಡೆಯಿಂದ ನ್ಯಾಯಾಲಯದಲ್ಲಿ ದಾಖಲಾಗುವ ಮೊಕದ್ದಮೆಗಳ ವಿಲೇವಾರಿ ವಿಳಂಬವಾಗುತ್ತಿದೆ’ ಎಂದು ಸಂಘವು ಆರೋಪಿಸಿದೆ.

‘ಪಿಎಎಲ್, ಹಸಿರು ಪೀಠ, ಮೇಲ್ಮನವಿ(ರಿಟ್) ಇತ್ಯಾದಿಗಳಂತಹ ಪ್ರಮುಖ ವಿಚಾರಣೆಯನ್ನು ಹೊಂದಿರುವ ಪೀಠದ ಅಧ್ಯಕ್ಷತೆಯನ್ನು ಮುಖ್ಯ ನ್ಯಾಯಾಧೀಶರು ವಹಿಸಿರುತ್ತಾರೆ. ಆದರೆ, ಮುಖ್ಯ ನ್ಯಾಯಾಧೀಶರು ನಡೆಯಿಂದ ಈ ಅರ್ಜಿಗಳು ಸೂಕ್ತ ಸಮಯದಲ್ಲಿ ವಿಲೇವಾರಿ ಆಗುತ್ತಿಲ್ಲ. ಇದು ಈಗಾಗಲೇ ನ್ಯಾಯಾಲಯದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸಿದೆ ಎಂದು ಸಂಘವು ಬೇಸರ ವ್ಯಕ್ತಪಡಿಸಿದೆ.

‘ಇದಲ್ಲದೆ, ಕಲಬುರಗಿ ಮತ್ತು ಧಾರವಾಡ ಪೀಠಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಕೆಲವು ನ್ಯಾಯಮೂರ್ತಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸದೆ, ಬೆಂಗಳೂರಿನ ಪೀಠದಲ್ಲೇ ಮುಂದುವರಿಯುತ್ತಿದ್ದಾರೆ. ಇದು ಹೈಕೋರ್ಟ್‍ನ ನ್ಯಾಯ ವಿತರಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಸಂಘ ತಿಳಿಸಿದೆ.

ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರ ಕಚೇರಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರವಿದೆ. ನಿರ್ದಿಷ್ಟ ಪೀಠದ ಮುಂದೆ ಪಟ್ಟಿ ಮಾಡಲಾದ ವಿಷಯಗಳನ್ನು ಪಡೆಯಲು ಹಾಗೂ ಶೀಘ್ರವಾಗಿ ವಿಷಯಗಳು ಪೀಠದ ಮುಂದೆ ಬರುವುದು ಸೇರಿ ಇತ್ಯಾದಿ ವಿಚಾರಗಳಿಗೆ ಹಣದ ಬೇಡಿಕೆ ಇಡಲಾಗುತ್ತದೆ ಎಂದು ವಕೀಲರ ಸಂಘವು ಪತ್ರದಲ್ಲಿ ಆರೋಪಿಸಿದೆ.

ನ್ಯಾಯಾಲಯದ ಅಧಿಕಾರಿಗಳಾಗಿ ವ್ಯವಸ್ಥೆಯಲ್ಲಿನ ವೈಪರೀತ್ಯಗಳನ್ನು ತಮ್ಮ ಗಮನಕ್ಕೆ ತರುವುದು ಸಂಘದ ಕರ್ತವ್ಯವಾಗಿದೆ. ಹೀಗಾಗಿ ಪತ್ರವನ್ನು ಬರೆಯಲಾಗಿದ್ದು, ನ್ಯಾಯಾಲಯದ ಆಡಳಿತ ಸಮಸ್ಯೆಗಳು ಬಗೆಹರಿಯಬಹುದು ಎಂದು ಸಂಘವು ವಿಶ್ವಾಸ ವ್ಯಕ್ತಪಡಿಸಿದೆ.

Leave A Reply

Your email address will not be published.