ಬೆಂಗಳೂರು: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಜಗಜ್ಯೋತಿ ಬಸವಣ್ಣ ಬಗ್ಗೆ ಹೇಡಿ ಎಂಬ ರೀತಿ ಮಾತಾಡಿದ್ದನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆ ನಿಲ್ಲಿಸದಿದ್ದರೆ ಬಸವ ಅನುಯಾಯಿಗಳು ಹೋರಾಟ ಮಾಡಲಿದ್ದಾರೆ ಎಂದು ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಎಚ್ಚರಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯತ್ನಾಳ್ ಅವರದ್ದು ವಿನಾಶಕಾಲೇ ವಿಪರೀತ ಬುದ್ಧಿ. ಅವರು ವಿನಾಶ ಆಗಿಯೇ ಆಗುತ್ತಾರೆ. ಅವರು ಪದೇ ಪದೇ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅವಮಾನ ಮಾಡುವ ರೀತಿ ಹೇಳಿಕೆ ನೀಡುವುದು ಖಂಡನೀಯ ಎಂದರು.
ಯತ್ನಾಳ್ ಲಿಂಗಾಯತ ಪಂಚಮಸಾಲಿ ಧರ್ಮದಲ್ಲಿ ಜನಿಸಿ ಈ ರೀತಿ ಮಾತನಾಡುವುದು ಸರಿಯಲ್ಲ. ಯತ್ನಾಳ್ ಕ್ಷಮೆ ಕೇಳುವುದಕ್ಕೂ ಅರ್ಹರಲ್ಲ. ಅವರು ಎಲ್ಲರ ಬಗ್ಗೆಯೂ ಮಾತನಾಡ್ತಾರೆ. ಹೇಳಿಕೆಗಳನ್ನು ನಿಲ್ಲಿಸದೇ ಇದ್ದರೆ ಬಸವ ಅನುಯಾಯಿಗಳು ಹೋರಾಟ ಮಾಡುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಇನ್ನೂ, ಪಂಚಮಸಾಲಿ ಹೋರಾಟ ಯತ್ನಾಳ್‍ಗೆ ಸೀಮಿತವಾದ ಹೋರಾಟವಾಗಿದೆ. ಜಯ ಮೃತ್ಯುಂಜಯ ಸ್ವಾಮೀಜಿಗಳು ಕೇವಲ ಯತ್ನಾಳ್ ಪರ ಮಾತನಾಡುತ್ತಾರೆ ಎಂದ ಅವರು, ವಕ್ಫ್ ಬಗ್ಗೆ ಯತ್ನಾಳ್ ಹೋರಾಟ ಕಪಟ ನಾಟಕ. ಅವರದ್ದು ಯಾವ ರೈತರ ಪರ ಹೋರಾಟವೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ‘ವಿಜಯೇಂದ್ರ ಹಠಾವೋ ಪಾರ್ಟಿ ಬಚಾವೋ’ ಎನ್ನುವುದೇ ಯತ್ನಾಳ್ ಅವರ ಹೋರಾಟ. ಇನ್ನೂ, ಪಂಚಮಸಾಲಿ ಸಮುದಾಯ ಕೇವಲ ಬಿಜೆಪಿ ಪರವಾಗಿ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದರು.