ಹಾವೇರಿ : ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರು ಮಾಡಿದ್ದ 300 ಕೋಟಿ ರೂ. ಅನುದಾನದಲ್ಲಿ ಬಾಕಿ ಉಳಿದಿರುವ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಿ, ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಈಗ ತಾನೇ ನಡೆದ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯು ಜಯಶಾಲಿಯಾಗಿದ್ದು, ತಮಗೂ ಹಾಗೂ ತಮ್ಮ ಪಕ್ಷಕ್ಕೆ ಅಭಿನಂದನೆಗಳು.
ನಮ್ಮ ಸರಕಾರವಿದ್ದಾಗ ಹಲವಾರು ಯೋಜನೆ ಹಾಗೂ ಕಾಮಗಾರಿಗಳಿಗೆ ಸುಮಾರು ರೂ.300 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದು, ಅದರಲ್ಲಿ ಕೆಲವೊಂದು ಕಾಮಗಾರಿಗಳು ಸ್ಥಗಿತಗೊಳಿಸಲಾಗಿದ್ದು. ಕೆಲವೊಂದು ಕಾಮಗಾರಿಗಳನ್ನು ರದ್ದು ಮಾಡಲಾಗಿದೆ. ಈ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನೀರಾವರಿ, ಮುಜರಾಯಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಮತ್ತು ನಿಗಮಗಳಿಂದ ಕೈಗೊಳ್ಳಲಾಗಿತ್ತು. ಈ ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಈಗಾಲಾದರೂ ಅವುಗಳಿಗೆ ಮತ್ತೆ ಚಾಲನೆಕೊಟ್ಟು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದಿದ್ದಾರೆ.
ಕೆಲವೊಂದು ಪ್ರಮುಖ ಕಾಮಗಾರಿಗಳ ಸ್ಥಿತಿ ಗತಿಗಳ ವಿವರಗಳನ್ನು ತಮ್ಮ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದ ಅವರು, ಶಿಗ್ಗಾಂವಿಯ 250 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ 96.50 ಕೋಟಿ ರೂ. ಮಂಜೂರಾಗಿದ್ದು, 27.34 ಕೋಟಿ ರೂ. ಬಾಕಿ ಉಳಿದಿದೆ. ಶಿಗ್ಗಾಂವಿಯ ವಿವಿಐಪಿ ಅತಿಥಿ ಗೃಹ ನಿರ್ಮಾಣಕ್ಕೆ 5.30 ಕೋಟಿ ರೂ. ಮಂಜೂರಾಗಿದ್ದು, 78.00 ಲಕ್ಷ ರೂ. ಬಾಕಿ ಉಳಿದಿದೆ.
ಸರಕಾರಿ ಉಪಕರಣಗಳ ತರಬೇತಿ ಕೇಂದ್ರದ ಕಟ್ಟಡ (ಜೆ.ಟಿ.ಟಿ.ಸಿ) ನಿರ್ಮಾಣಕ್ಕೆ 73.75 ಕೋಟಿ ರೂ. ಮಂಜೂರಾಗಿದ್ದು, 50.00 ಕೋಟಿ ರೂ (ನಬಾರ್ಡ್) ಬಾಕಿ ಉಳಿದಿದೆ. ಶೀತಲ ಗೃಹ ನಿರ್ಮಾಣಕ್ಕೆ 9.83 ಕೋಟಿ ಮಂಜೂರಾಗಿದ್ದು 6.00 ಕೋಟಿ ರೂ. ಬಾಕಿ ಉಳಿದಿದೆ. ಶಿಗ್ಗಾಂವಿಯಲ್ಲಿ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣಕ್ಕೆ 31.25 ಕೋಟಿ ರೂ. ಮಂಜೂರಾಗಿದ್ದು, 5.50 ಕೋಟಿ ರೂ. ಬಾಕಿ ಉಳಿದಿದೆ. ಸವಣೂರು ಆಯುರ್ವೇದಿಕ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 44.00 ಕೋಟಿ ರೂ. ಮಂಜೂರಾಗಿದ್ದು, 18.59 ಬಾಕಿ ಉಳಿದಿದೆ ಎಂದಿದ್ದಾರೆ.
ತಾವು ಎರಡನೇ ಭಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ ರಾಜ್ಯ ಭಾರವನ್ನು ಮಾಡುತ್ತಿದ್ದು. ತಮ್ಮ ಅನುಭವದಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ತಮಗೆ ಹೇಳಬೇಕಾಗಿಲ್ಲ. ಅದರಲ್ಲಿ ವಿಶೇಷವಾಗಿ ಅರ್ಧಕ್ಕಿಂತ ಹೆಚ್ಚು ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಅತಿ ಅವಶ್ಯಕತೆಯಿರುತ್ತದೆ. ಉಪ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ತಾವು ಕೊಟ್ಟ ಮಾತಿನಂತೆ ಮೇಲೆ ಕಾಣಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಶಿಗ್ಗಾಂವಿ-ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತೀರ ಎಂದು ನಂಬಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.