EBM News Kannada
Leading News Portal in Kannada

ನಬಾರ್ಡ್ ನೀಡುವ ಸಾಲದಲ್ಲಿ ಇಳಿಕೆ | ರಾಜ್ಯದ ರೈತರಿಗೆ ಮಾಡುತ್ತಿರುವ ಅನ್ಯಾಯ : ಸಿಎಂ ಸಿದ್ದರಾಮಯ್ಯ

0


ಹೊಸದಿಲ್ಲಿ : ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿ 10 ರಿಂದ 12 ಶೇಕಡಾ ಬಡ್ಡಿ ಹಾಕುತ್ತಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಹೊಸದಿಲ್ಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಈ ಬಗ್ಗೆ ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದು, ಇದನ್ನು ಆರ್.ಬಿ.ಐ ಒಪ್ಪಿಲ್ಲ ಎಂದು ಸಚಿವರು ಉತ್ತರವನ್ನೂ ಬರೆದಿದ್ದಾರೆ. ನಬಾರ್ಡ್ ಕೇಂದ್ರ ಸರ್ಕಾರದ ಕೆಳಗೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸಚಿವರೇ ಅಸಹಾಯಕತೆಯನು ವ್ಯಕ್ತಪಡಿಸಿದರೆ ಹೇಗೆ?ʼ ಎಂದರು.

ನಬಾರ್ಡ್ ನಲ್ಲಿ ಕಳೆದ ವರ್ಷ 5600 ಕೋಟಿ ರೂ.ಗಳನ್ನು ಅಲ್ಪಾವಧಿ ಸಾಲಕ್ಕಾಗಿ ನೀಡಲಾಗಿತ್ತು. ಈ ವರ್ಷ 2340 ಕೊಟಿ ರೂ.ಗಳನ್ನು ನೀಡಿದ್ದಾರೆ. 3220 ಕೋಟಿ ರೂ.ಗಳನ್ನು ಕಡಿತಗೊಳಿಸಲಾಗಿದೆ. ಶೇ.58 ರಷ್ಟು ಕಡಿಮೆ ಮಾಡಿರುವುದು ರೈತರಿಗೆ ಮಾಡಿರುವ ದ್ರೋಹ. ನಬಾರ್ಡ್ ಶೇ.4.50 ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. 5 ವರ್ಷಗಳ ಅಂಕಿ ಅಂಶಗಳನ್ನು ತೆಗೆದು ನೋಡಿದರೆ ಸಾಲ ಕೊಡುವುದು ಯಾವಾಗಲೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವರಿಸಲಾಗಿದೆ. ಆರು ವರ್ಷಗಳಿಂದ ಜಾಸ್ತಿ ಕೊಟ್ಟಿದ್ದು, ಈಗ ಕಡಿಮೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ಬಿಜೆಪಿಗೆ ಬಡವರ ಕುರಿತು ಯಾವ ಕಾಳಜಿಯೂ ಇಲ್ಲ :

ಸರ್ಕಾರಿ ನೌಕರರು, ತೆರಿಗೆದಾರರನ್ನು ಬಿಟ್ಟು ಬೇರೆ ಯಾರನ್ನೂ ಬಿಪಿಎಲ್ ಕಾರ್ಡಿನಿಂದ ತೆಗೆಯಬೇಡಿ ಎಂದು ಸೂಚಿಸಿರುವುದಾಗಿ ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ಬಿಜೆಪಿಯವರು ರಾಜಕೀಯಕ್ಕಾಗಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯಾರು? . ಅದನ್ನು ಜಾರಿಗೆ ತಂದಿದ್ದು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು. ರಾಜ್ಯಸಭೆಯಲ್ಲಿ ಮಂಡಿಸಿದಾಗ ಮುರಳಿ ಮನೋಹರ್ ಜೋಶಿ ಅವರು ಅದನ್ನು ವಿರೋಧಿಸಿ ಭಾಷಣ ಮಾಡಿದ್ದಾರೆ. ಅದು ಆಹಾರ ಭದ್ರತಾ ಕಾಯ್ದೆಯಲ್ಲ, ಮತ ಭದ್ರತಾ ಕಾಯ್ದೆ ಎಂದು ಕರೆದಿದ್ದರು . ಅಂದರೆ ಆಹಾರ ಭದ್ರತಾ ಕಾಯ್ದೆಗೆ ಅವರು ವಿರೋಧವಾಗಿದ್ದರು. ಇವರಿಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ? ಎಂದರು.

ಬಿಪಿಎಲ್ ಕಾರ್ಡು ರೂಪಿಸಿರುವುದು ಬಡವರಿಗಾಗಿ :

ಕರ್ನಾಟಕದಲ್ಲಿ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದು ಸಿದ್ದರಾಮಯ್ಯನ ಸರಕಾರ. 7 ರಿಂದ 5 ಕೆ.ಜಿಗೆ ಇಳಿಸಿದ್ದು ಬಿ.ಎಸ್.ಯಡಿಯೂರಪ್ಪ. ಆರ್.ಅಶೋಕ್ ಅವರು ಸಚಿವ ಸಂಪುಟದಲ್ಲಿದ್ದರು. 2 ಕೆ.ಜಿಯನ್ನು ಕಡಿಮೆ ಮಾಡಿದಾಗ ಯಾಕೆ ಉಸಿರೆತ್ತಲಿಲ್ಲ. ಆಹಾರ ಭದ್ರತಾ ಕಾಯ್ದೆಯನ್ನು ವಿರೋಧಿಸಿದ ಬಿಜೆಪಿ ಬಡವರ ಬಗ್ಗೆ ಮಾತನಾಡುತ್ತಾರೆ. ಆಹಾರ ಪದಾರ್ಥಗಳನ್ನು ಉಚಿತವಾಗಿ ಕೊಡಬೇಕೆಂದು ಯೋಜನೆ ಜಾರಿಗೆ ತಂದಿದ್ದು ನಾವು. ಸರಕಾರಿ ನೌಕರರು, ತೆರಿಗೆದಾರರಿಗೆ ಬಿಪಿಎಲ್ ಕಾರ್ಡು ಕೊಡಬಾರದು ಎಂದು ಹೇಳಿದ್ದೇವೆ. ಈ ಯೋಜನೆ ಮಾಡಿರುವುದು ಬಡವರಿಗಾಗಿ. ಸರಕಾರಿ ನೌಕರರು ಬಿಪಿಎಲ್ ಗೆ ಅರ್ಹರೇ? ಎಂದು ಪ್ರಶ್ನಿಸಿದರು.

ಬಿಜೆಪಿ ಭರವಸೆ ನೀಡಿದ್ದ ಶೇ.10 ರಷ್ಟನ್ನೂ ಈಡೇರಿಸಿಲ್ಲ :

ಬಿಜೆಪಿ ಮೂರು ವರ್ಷಗಳ ಅಧಿಕಾರದಲ್ಲಿದ್ದು ಏನೇನು ಮಾಡಿದ್ದಾರೆ? 2018 ರಲ್ಲಿ 600 ಭರವಸೆ ನೀಡಿ ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು ಮೊದಲನೇ ಸಚಿವ ಸಂಪುಟದಲ್ಲಿಯೇ ಹೇಳಿದ್ದರು ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಶೇ.10 ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ. ರಾಜಕಾರಣಕ್ಕಾಗಿ ಹೇಳುತ್ತಿದ್ದಾರೆ ಎಂದರು.

Leave A Reply

Your email address will not be published.