ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರವು ಪ್ಯಾನ್ ಕಾರ್ಡನ್ನು ಆಧಾರವಾಗಿ ಇಟ್ಟುಕೊಂಡು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಗುರುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತಿದ್ದಾರೆ. ಬಿಪಿಎಲ್ 11.5 ಲಕ್ಷ ಕಾರ್ಡುಗಳನ್ನು ಏಕಾಏಕಿ ರದ್ದು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 10-15 ಲಕ್ಷ ಕಾರ್ಡ್‍ಗಳನ್ನು ರದ್ದು ಮಾಡಲಿದ್ದಾರೆ. ಪ್ಯಾನ್ ಕಾರ್ಡ್ ಎಂದರೆ ಬೀದಿ ಬದಿಯ ವ್ಯಾಪಾರಿಗಳು ಕೂಡ ಅದನ್ನು ಹೊಂದಿದ್ದಾರೆ. ಅದಿಲ್ಲದೆ ವ್ಯವಹಾರ ಆಗುವುದಿಲ್ಲʼ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಅಧಿಕಾರಿಗಳು ವೈಜ್ಞಾನಿಕವಾಗಿ ಕಾರ್ಯ ನಿರ್ವಹಿಸಿಲ್ಲ. ಮುಂದಿನ 15-20 ದಿನಗಳಲ್ಲಿ ಏಕಾಏಕಿಯಾಗಿ 20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ, ಮುಖ್ಯಮಂತ್ರಿಗಳಿಗೆ ಸಾವಿರಾರು ಕೋಟಿ ಗೃಹಲಕ್ಷ್ಮಿ ಯೋಜನೆಯ ಹಣ ಉಳಿಯಲಿದೆ. ಮತ್ತೊಂದು ಕಡೆ ಬಿಪಿಎಲ್ ಕಾರ್ಡ್‍ಗೆ ಕೊಡುವ 5 ಕೆಜಿ ಅಕ್ಕಿಗೆ ಸಂಬಂಧಿಸಿ ಹಣ ಹಾಕುವುದೂ ಉಳಿಯಲಿದೆ ಎಂದು ಆರೋಪಿಸಿದರು.
ಗ್ಯಾರಂಟಿ, ಗ್ಯಾರಂಟಿ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದರು. ಆದರೆ, ಜನರು ಇವತ್ತು ಛೀ ಥೂ ಎಂದು ಉಗಿಯುವಂತಾಗಿದೆ. ಬಿಪಿಎಲ್ ಕಾರ್ಡ್ ಕೊಡಿ ಎಂದು ತಾಯಂದಿರು ಕಣ್ಣೀರು ಹಾಕುತ್ತಿದ್ದಾರೆ ಎಂದ ಅವರು, ಒಂದೆಡೆ ವಕ್ಫ್ ವಿಚಾರದಲ್ಲಿ ರೈತರಿಗೆ ಬರೆ ಎಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ತಮಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಇನ್ನೊಂದೆಡೆ ಸಚಿವರ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಇದು ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಷರಾ ಬರೆಯುತ್ತಿದ್ದಾರೆ ಎಂದರು.
ಹಣಕಾಸು ಕ್ರೋಡೀಕರಿಸಲು ಆಗದೆ ಸಿಎಂ ಪರದಾಟ :
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ರೈತರು, ಆಡಳಿತ ಪಕ್ಷದ ಶಾಸಕರು ಸೇರಿ ಯಾರಿಗೂ ನೆಮ್ಮದಿ ಇಲ್ಲವಾಗಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಅಸಮರ್ಥ ಮುಖ್ಯಮಂತ್ರಿಗಳು ರಾಜ್ಯದಲ್ಲಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಶಾಸಕರಾಗಿ ಆಯ್ಕೆಯಾದುದು ದುರ್ದೈವ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಹತಾಶ ಹಿರಿಯ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ತಾವೇ ಗ್ಯಾರಂಟಿ ನೀಡಿದ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ಮುಗ್ಗಟ್ಟು, ಹಣಕಾಸು ಕ್ರೋಡೀಕರಿಸಲು ಆಗದೆ ಸಿಎಂ ಪರದಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಸಿಎಂ ಅಸಮರ್ಥರು :
ಹಣಕಾಸು ಕ್ರೋಡೀಕರಿಸುವಲ್ಲಿ ವಿಫಲವಾದ ರಾಜ್ಯ ಸರಕಾರವು ಸರಕಾರಿ ನೌಕರರಿಗೆ ವೇತನ ಕೊಡಲು ಪರದಾಡುವ ಸ್ಥಿತಿ ಬಂದಿದೆ. 15 ಬಜೆಟ್ ಮಂಡಿಸಿದ್ದಾಗಿ ಹೆಮ್ಮೆ ಪಟ್ಟುಕೊಳ್ಳುವ ಮುಖ್ಯಮಂತ್ರಿಗಳು, ರಾಜ್ಯದ ಸಿಎಂ ಅಸಮರ್ಥರಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ದೂರಿದರು.