EBM News Kannada
Leading News Portal in Kannada

ಫೆ.11ರಿಂದ 14ರ ವರೆಗೆ ʼಇನ್ವೆಸ್ಟ್ ಕರ್ನಾಟಕʼ ಸಮಾವೇಶ : ಸಚಿವ ಎಂ.ಬಿ.ಪಾಟೀಲ್

0


ಬೆಂಗಳೂರು : ಮುಂಬರುವ ಫೆಬ್ರವರಿ 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ(ಇನ್ವೆಸ್ಟ್ ಕರ್ನಾಟಕ)ದಲ್ಲಿ ಕರ್ನಾಟಕವು ಹೂಡಿಕೆಗೆ ಅತ್ಯುತ್ತಮ ತಾಣವೆನ್ನುವುದನ್ನು ಮನದಟ್ಟು ಮಾಡಿಕೊಡುವ ರೀತಿಯಲ್ಲಿ ಅತ್ಯುತ್ತಮವಾಗಿ ಬಿಂಬಿಸಲು ತೀರ್ಮಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಬುಧವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ʼಇನ್ವೆಸ್ಟ್ ಕರ್ನಾಟಕ-2025ʼರ ಮೊಟ್ಟಮೊದಲ ಜಾಗತಿಕ ಹೂಡಿಕೆದರರ ಸಮಾವೇಶದ ಸಮನ್ವಯ ಸಭೆಯಲ್ಲಿ ನಾನಾ ಇಲಾಖೆಯ ಉನ್ನತಾಧಿಕಾರಿಗಳು, ಕೈಗಾರಿಕಾ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಜೊತೆ ಅವರು ವಿಚಾರ ವಿನಿಮಯ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಎಂ.ಬಿ.ಪಾಟೀಲ್, ʼಜಾಗತಿಕ ಹೂಡಿಕೆದಾರರ ಸಮಾವೇಶವು ಬಂಡವಾಳ ಹೂಡಿಕೆ, ಕೈಗಾರಿಕಾ ಮತ್ತು ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಹೀಗೆ ಹಲವು ದೃಷ್ಟಿಗಳಿಂದ ಮಹತ್ವದ್ದಾಗಿದೆ. ಈ ಸಮಾವೇಶದಲ್ಲಿ ದೇಶ-ವಿದೇಶಗಳ 5 ಸಾವಿರ ಪ್ರತಿನಿಧಿಗಳು ಮತ್ತು ತಾಂತ್ರಿಕ ಪರಿಣಿತರು ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆ ನೀಡುತ್ತಿದ್ದು, ಮಹಿಳಾ ಉದ್ಯಮಿಗಳಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುತ್ತಿದೆ’ ಎಂದರು.

2025ರ ಫೆ.11ರ ಸಂಜೆಯೇ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಫೆ.12 ಮತ್ತು 13ರಂದು ಸಂಪೂರ್ಣವಾಗಿ ಎರಡು ದಿನ ಗಂಭೀರ ಚರ್ಚೆಗಳು ನಡೆಯಲಿವೆ. ಫೆ.14ರಂದು ಸಮಾವೇಶದ ಸಮಾರೋಪ ನಿಗದಿಯಾಗಿದೆ. ಸಮಾವೇಶವನ್ನು ಯಶಸ್ವಿಗೊಳಿಸಲೆಂದು ಈಗಾಗಲೇ ಅಮೇರಿಕ ಮತ್ತು ಜಪಾನಿನಲ್ಲಿ ರೋಡ್ ಶೋ ನಡೆಸಲಾಗಿದೆ. ಸದ್ಯದಲ್ಲೇ ಯೂರೋಪಿನಲ್ಲೂ ರೋಡ್-ಶೋ ನಡೆಯಲಿದೆ. ಗಣ್ಯ ಸಾಧಕರೊಬ್ಬರನ್ನು ಸಮಾವೇಶದ ಉದ್ಘಾಟಕರನ್ನಾಗಿ ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.

ಆಮಂತ್ರಿತ ಉದ್ಯಮಿಗಳು ಬಯಸಿದರೆ ರಾಜ್ಯದ ಪ್ರವಾಸಿ ತಾಣಗಳಿಗೆ ಅವರನ್ನು ಕರೆದೊಯ್ಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಲಾಗಿದೆ. ಆಹ್ವಾನಿತರಿಗೆ ಸುಗಮ ಸಂಚಾರ, ವಸತಿ ಮತ್ತು ಆತಿಥ್ಯ, ಕಾನೂನು ಮತ್ತು ಸುವ್ಯವಸ್ಥೆ ಯಾವುದರಲ್ಲೂ ಕಿಂಚಿತ್ತೂ ಲೋಪವಾಗದಂತೆ ಆಯಾ ಇಲಾಖೆಗಳು ನೋಡಿಕೊಳ್ಳಬೇಕು. ಈ ಸಮಾವೇಶದ ಮೂಲಕ ರಾಜ್ಯದ ವರ್ಚಸ್ಸು ಹೆಚ್ಚಾಗುವಂತೆ ಆಗಬೇಕು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಸಭೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಉಪಸ್ಥಿತರಿದ್ದರು. ಜೊತೆಗೆ ಕೃಷಿ, ಗಣಿ ಮತ್ತು ಜವಳಿ, ಪ್ರವಾಸೋದ್ಯಮ, ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು, ಬಿಡಿಎ, ಬಿಎಂಟಿಸಿ, ಕೆಎಸ್‍ಐಡಿಸಿ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆ ಇಲಾಖೆಗಳ ಉನ್ನತ ಅಧಿಕಾರಿಗಳು, ಎಫ್‍ಕೆಸಿಸಿಐ, ಅಸೋಚಂ, ಕಾಸಿಯಾ, ಬಿಸಿಐಸಿ, ಅವೇಕ್, ಡಿಐಸಿಸಿಐ, ಕರ್ನಾಟಕ ದಲಿತ ಉದ್ಯಮಿಗಳ ಒಕ್ಕೂಟ, ಲಘು ಉದ್ಯೋಗ ಭಾರತಿ, ಏವಿಯಾನ್ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Leave A Reply

Your email address will not be published.