EBM News Kannada
Leading News Portal in Kannada

ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪಿಸಲು ಸಂಪುಟದ ಅನುಮೋದನೆ : ಸಚಿವ ಎನ್.ಚಲುವರಾಯಸ್ವಾಮಿ

0


ಬೆಂಗಳೂರು : ಕೃಷಿ ಇಲಾಖೆಯ ಆಧಾರ ಸ್ತಂಭಗಳಾದ ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ಪರತಂತ್ರ ಜೀವಿ ಪ್ರಯೋಗಾಲಯಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸಲು ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಯನ್ನು ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.

ಬೆಳೆಗಳಲ್ಲಿ ಕಂಡುಬರುವ ಕೀಟ/ರೋಗ ಬಾಧೆ ಹಾಗೂ ಪೋಷಕಾಂಶಗಳ ಕೊರತೆಯನ್ನು ನಿಖರವಾಗಿ ಗುರುತಿಸಿ, ಪೀಡೆ ಬಾಧೆಯ ತೀವ್ರತೆಗನುಗುಣವಾಗಿ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಲುಪಿಸಲು ಇ-ಸ್ಯಾಪ್ ತಂತ್ರಜ್ಞಾನವನ್ನು ಜಾರಿಗೊಳಿಸಿ ಇಲ್ಲಿಯವರೆಗೆ 70,016 ರೈತರಿಗೆ 1,30,152 ವಿವಿಧ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಮಣ್ಣು ಪರೀಕ್ಷೆಗೆ ಭೂಸಾರ ಆಪ್ ತಂತ್ರಾಂಶ ಬಳಸಿ 4.76 ಲಕ್ಷ ಮಣ್ಣು ಮಾದರಿಗಳ ಗುರಿಗೆ ಇಲ್ಲಿಯವರೆಗೆ 4.54 ಲಕ್ಷ ಮಣ್ಣು ಮಾದರಿಗಳನ್ನು ಸಂಗ್ರಹಿಸಿದ್ದು, 2.30 ಲಕ್ಷ ಮಣ್ಣು ಮಾದರಿಗಳನ್ನು ವಿಶ್ಲೇಷಿಸಿ 1.58 ಲಕ್ಷ ಮಣ್ಣು ಆರೋಗ್ಯ ಕಾರ್ಡ್‍ಗಳನ್ನು ವಿತರಿಸಲಾಗಿರುತ್ತದೆ. ರಾಜ್ಯದಲ್ಲಿನ 29 ಮಣ್ಣು ಆರೋಗ್ಯ ಕೇಂದ್ರಗಳ ಪೈಕಿ 26 ಕೇಂದ್ರಗಳಿಗೆ ಎನ್‍ಎಬಿಎಲ್ ಪಡೆಯಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಕೇಂದ್ರ ಪುರಸ್ಕೃತ ಯೋಜನೆಗಳಡಿ 2023-24ನೇ ಸಾಲಿನಲ್ಲಿ ಕೇಂದ್ರ ಸರಕಾರದಿಂದ ವಿವಿಧ ಯೋಜನೆಗಳಿಗೆ 297 ಕೋಟಿ ರೂ. ಅನುದಾನವನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಬಿತ್ತನೆ ಬೀಜ ವಿತರಣೆ ಹಾಗೂ ರಸಗೊಬ್ಬರ ಪೂರೈಕೆಯನ್ನು ಯಾವುದೇ ಕೊರತೆ ಮತ್ತು ದೂರು ಇಲ್ಲದಂತೆ ನಿರ್ವಹಿಸಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

2023-24ನೇ ಸಾಲಿನಲ್ಲಿ 13 ಲಕ್ಷ ರೈತರಿಗೆ 5.77 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ವಿತರಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 12.92 ಲಕ್ಷ ಫಲಾನುಭವಿಗಳಿಗೆ 6.11ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಇಲ್ಲಿಯವರೆಗೆ ವಿತರಣೆ ಮಾಡಲಾಗಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ 46,000 ಕ್ವಿಂಟಾಲ್ ಹೆಚ್ಚುವರಿ ಬಿತ್ತನೆ ಬೀಜವನ್ನು ಸಹಾಯಧನದಡಿಯಲ್ಲಿ ವಿತರಿಸಲಾಗಿದೆ. ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು.

ಸಾವಯವ-ಸಿರಿಧಾನ್ಯ ಹಬ್ ಸ್ಥಾಪನೆಗೆ 20 ಕೋಟಿ ರೂ.ಅನುದಾನ: ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರಿಗೆ, ಮಾರುಕಟ್ಟೆದಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ಮಾರುಕಟ್ಟೆ ಸಂಪರ್ಕವನ್ನು ವಿಸ್ತರಿಸಲು ಮತ್ತು ಆರೋಗ್ಯವನ್ನು ಸುಧಾರಿಸಲು ಸಾವಯವ ಮತ್ತು ಸಿರಿಧಾನ್ಯ ಹಬ್ ಅನ್ನು ಹೆಬ್ಬಾಳ, ಬೆಂಗಳೂರಿನಲ್ಲಿ 20 ಕೋಟಿ ರೂ. ಅನುದಾನದಲ್ಲಿ ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ನೀಡಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

Leave A Reply

Your email address will not be published.