ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡಮಿಯು 2022ನೆ ವರ್ಷದ ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ, 2021ನೆ ಸಾಲಿನ ಪುಸ್ತಕ ಬಹುಮಾನ ಹಾಗೂ ದತ್ತಿ ಬಹುಮಾನ ಪ್ರಕಟಿಸಿದ್ದು, ಹಿರಿಯ ಸಾಹಿತಿ ರಂಜಾನ್ ದರ್ಗಾ ಸೇರಿ 5 ಮಂದಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, 10 ಮಂದಿ ಸಾಹಿತ್ಯ ಶ್ರೀ ಪ್ರಶಸ್ತಿ, 17 ಜನರಿಗೆ 2021ನೆ ಪುಸ್ತಕ ಬಹುಮಾನ, 8 ಜನರಿಗೆ ದತ್ತಿ ಬಹುಮಾನ ಪುರಸ್ಕೃತರಾಗಿದ್ದಾರೆ ಎಂದು ಅಕಾಡಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.
ಬುಧವಾರ ನಗರದ ಸಾಹಿತ್ಯ ಅಕಾಡಮಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ, 2022ನೆ ಸಾಲಿನ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಗೆ ಸಾಹಿತಿಗಳಾದ ಆರ್.ಕೆ.ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗಡೆ, ರಂಜಾನ್ ದರ್ಗಾ, ತುಂಬಾಡಿ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
2021ನೆ ವರ್ಷದಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ, ಚೀಮನಹಳ್ಳಿ ರಮೇಶಬಾಬು ಅವರ ರಾಗಿಕಾಳು, ಡಾ.ಶೈಲೇಶ್ ಕುಮಾರ್ ಅವರ ದಡ ಸೇರಿದ ಕನಸು, ಡಾ.ಗಜಾನನ ಶರ್ಮ ಅವರ ಕಾದಂಬರಿ ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ, ಜಿ.ವಿ.ಆನಂದಮೂರ್ತಿ ಅವರ ಗುಣಸಾಗರಿ ಮತ್ತು ಇತರ ಕತೆಗಳು, ಬಿ.ಆರ್.ಪೊಲೀಸ್ ಪಾಟೀಲ್ ಅವರ ನಾಟಕ ಮಹಾ ಮಹಿಮ ಎಡೆಯೂರು ಸಿದ್ಧಲಿಂಗ ಶಿವಯೋಗಿ, ಭಾರತಿ ಬಿ.ವಿ.ಅವರ ಲಲಿತ ಪ್ರಬಂಧ ಎಲ್ಲಿಂದಲೋ ಬಂದವರು.
ಡಾ.ಎಸ್.ಬಿ.ಪದ್ಮಪ್ರಸಾದ್ ಅವರ ಪ್ರವಾಸ ಸಾಹಿತ್ಯ ಬುದ್ಧಭಕ್ತರ ನಾಡಿನಲ್ಲಿ, ಡಾ.ಡೊಮಿನಿಕ್ ಡಿ. ಅವರ ಅಕ್ಕಯ್, ಡಾ.ಎಚ್.ಎಸ್.ಸತ್ಯನಾರಾಯಣ ಅವರ ಸಾಹಿತ್ಯ ವಿಮರ್ಶೆ ಕಣ್ಣೋಟ, ಸಿ.ವಿ.ಶೇಷಾದ್ರಿ ಹೊಳವನಹಳ್ಳಿ ಅವರ ವಜ್ರದ ಕಿರೀಟ, ಡಾ.ಕಿರಣ್ ವಿ.ಎಸ್ ಅವರ ಸೆರೆಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು, ಡಾ.ಕೆ.ಎಸ್.ನಾಗರಾಜ ಅವರ ಸಂಕೇತ ವ್ಯಾಕರಣ ಮತ್ತು ಪದಕೋಶ, ಡಾ.ಎ.ಎಸ್.ಪ್ರಭಾಕರ ಅವರ ಚಹರೆಗಳೆಂದರೆ ಗಾಯಗಳೂ ಹೌದು, ದಾದಾಪೀರ್ ಜೈಮನ್ ಅವರ ಅನುವಾದ ಕೃತಿ ಪರ್ದಾ ಮತ್ತು ಪಾಲಿಗಳು, ಪುಜಾಫರ್ ಅಸಾದಿ ಅವರ ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ, ಡಾ.ಜಿ.ಕೃಷ್ಣಪ್ಪ ಅವರ ವಚನದೀಪಿಕೆ, ಯಶಸ್ವಿನಿ ಕದ್ರಿ ಅವರ ಊರು ಹೇಳದ ಕಥೆ ಕೃತಿಗಳು ಆಯ್ಕೆಯಾಗಿವೆ ಎಂದು ಮಾಹಿತಿ ನೀಡಿದರು.
ಗೌರವ ಪ್ರಶಸ್ತಿಯು 50ಸಾವಿರ ರೂ ನಗದು, ಸಾಹಿತ್ಯ ಶ್ರೀ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ 25 ಸಾವಿರ ರೂ. ನಗದು, ದತ್ತಿ ಬಹುಮಾನ 10 ಸಾವಿರ ರೂ.ನಗದು ಜತೆಗೆ ಶಾಲು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
‘ಸಾಹಿತ್ಯ ಶ್ರೀ’ ಪ್ರಶಸ್ತಿ ಪುರಸ್ಕೃತರು
•ಡಾ.ಬಂಜಗೆರೆ ಜಯಪ್ರಕಾಶ
•ರೂಮಿ ಹರೀಶ್
•ಡಾ.ಎಂ.ಜಿ.ಮಂಜುನಾಥ
•ದಾಸನೂರು ಕೂಸಣ್ಣ
•ಡಾ. ರಾಜಶೇಖರ ಹತಗುಂದಿ
•ಎಚ್.ಎನ್.ಆರತಿ
•ಡಾ.ಸಾರಿಕಾದೇವಿ ಕಾಳಗಿ
•ಮಹೇಶ್ ಹರವೆ
•ಅನಸೂಯ ಕಾಂಬ್ಳೆ
•ಚಲಂ ಹಾಡ್ಲಹಳ್ಳಿ
2021ನೆ ಸಾಲಿನ ದತ್ತಿ ಬಹುಮಾನ
ಲೇಖಕರು – ಕೃತಿಗಳು
•ಅಕ್ಷಯ ಕಾಂತಬೈಲು-ಹದಿನೆಂಟರಿಂದ ಇಪ್ಪತ್ತೆಂಟರ ಕವಿತೆಗಳು
•ಡಾ.ಶ್ರೀಧರ ಎಚ್.ಜಿ-ಚಪಡ ಇದು ಅಕ್ಷರದ ಪಯಣ
•ಸಹನಾ ಕಾಂತಬೈಲು-ಇದು ಬರಿ ಮಣ್ಣಲ್ಲ
•ಡಾ.ನಾಗ ಎಚ್.ಹುಬ್ಳಿ-ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್
•ಡಾ.ಪ್ರಸಾದಸ್ವಾಮಿ ಎಸ್.-ಬೆಡಗು ಬಿನ್ನಾಣ
•ಸುಮಂಗಲಾ-ಸೆಬಾಸ್ಟಿಯನ್ ಮತ್ತು ಸನ್ಸ್
•ಅಕ್ಷಯ ಪಂಡಿತ್-ಬಯಲಲಿ ತೇಲುತ ತಾನು
•ಡಾ.ಸುಶಿ ಕಾಡನಕುಪ್ಪೆ-ಅಸತ್ಯದ ಕೇಡು