EBM News Kannada
Leading News Portal in Kannada

ಬೆಂಗಳೂರು | ಕಾಲೇಜುಗಳಿಗೆ ‘ಬಾಂಬ್ ಬೆದರಿಕೆ’ ಇಮೇಲ್ : ಆರೋಪಿ ಬಂಧನ | Bangalore

0


ಬೆಂಗಳೂರು: ಕಾಲೇಜಿನ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್ ಕಳುಹಿಸಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ವಿ.ವಿ.ಪುರಂ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಿವಾಸಿ ದೀಪಾಂಜನ್ ಮಿತ್ರಾ(48) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿಯು ಅಕ್ಟೋಬರ್ 4ರಂದು ಬೆಂಗಳೂರು ಇನ್ಟ್ಸಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) ಹಾಗೂ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿರುವ ಬಿಎಂಎಸ್ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳಿಸಿದ್ದ. ತಾಂತ್ರಿಕ ವಿಧಾನಗಳ ಮೂಲಕ ಇಮೇಲ್ ಕಳುಹಿಸಲಾದ ಐಡಿಯ ಮೂಲ ಬೆನ್ನತ್ತಿದ ಪೊಲೀಸರು, ಅ.17ರಂದು ಡಾರ್ಜಿಲಿಂಗ್ ಜಿಲ್ಲೆಯ ಸಾಲ್‍ಬರಿ ಟೌನ್‍ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿ.ಕಾಂ. ವ್ಯಾಸಂಗ ಮಾಡಿರುವ ಈತನ ವಿರುದ್ಧ ಪ.ಬಂಗಾಳದ ವಿವಿಧೆಡೆ ಇದೇ ರೀತಿಯ 10 ಪ್ರಕರಣಗಳು ದಾಖಲಾಗಿವೆ. ಇದೀಗ ಬಂಧಿತನಿಂದ ಲ್ಯಾಪ್‍ಟಾಪ್, ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತನನ್ನು ಬೆಂಗಳೂರಿಗೆ ಕರೆತರಲು ಸ್ಥಳೀಯ ನ್ಯಾಯಾಲಯದಿಂದ ಟ್ರಾನ್ಸಿಟ್ ವಾರೆಂಟ್ ಸಿಗದ ಕಾರಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಈ ಹಿಂದೆ ಬೆಂಗಳೂರಿನ ವಿವಿಧ ಶಾಲಾ-ಕಾಲೇಜುಗಳಿಗೆ ಬಂದಿರುವ ಬಾಂಬ್ ಬೆದರಿಕೆ ಇಮೇಲ್‍ಗಳ ಹಿಂದೆ ಆರೋಪಿಯ ಕೈವಾಡವಿರುವುದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.