EBM News Kannada
Leading News Portal in Kannada

ಚನ್ನಪಟ್ಟಣಕ್ಕೆ ಗೆಲ್ಲುವ ಅಚ್ಚರಿ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಲಿದೆ : ಡಿ.ಕೆ.ಸುರೇಶ್

0


ಚನ್ನಪಟ್ಟಣ: “ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿ ಗೆಲ್ಲುವ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಶುಕ್ರವಾರ ಸದಾಶಿವನಗರ ತಮಗಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ʼಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಣೆ ಮಾಡಲು ಮುಂದಾಗಿದ್ದೇವೆ. ನಿರಂತರವಾಗಿ ಎರಡು ಮೂರು ದಿನ ಚರ್ಚೆ ನಡೆಸಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆʼ ಎಂದು ತಿಳಿಸಿದರು.

ʼಮುಡಾʼ ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆದಿಲ್ಲ :

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ಸಂಸ್ಥೆ 15ದಿನಗಳ ಹಿಂದೆಯೇ ಪ್ರಕರಣ ದಾಖಲಿಸಿಕೊಂಡಿದೆ. ಅವರು ಕಾನೂನು ಪ್ರಕಾರ ತಮ್ಮ ಕೆಲಸದ ಭಾಗವಾಗಿ ಮುಡಾ ಕಚೇರಿ ಹಾಗೂ ಸಂಬಂಧಪಟ್ಟವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಇದು ಪಾರದರ್ಶಕವಾದ ವಿಚಾರಣೆ. ಈಡಿ ತನಿಖೆ ಮಾಡಬೇಕಾದರೆ ಕೆಲವು ಪ್ರಕ್ರಿಯೆ ಪಾಲಿಸಬೇಕು. ಇದು ಅವರ ಕಾರ್ಯವೈಖರಿ ಎಂದು ಹೇಳಿದರು.

ಈಡಿ ಸಂಸ್ಥೆ ಏನೇ ಮಾಡಿದರೂ ಮುಡಾ ಪ್ರಕರಣದಲ್ಲಿ ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆದಿಲ್ಲ. ನ್ಯಾಯಾಲಯದ ವಿಚಾರಣೆಯಲ್ಲೂ ಯಾವುದೇ ಹಂತದಲ್ಲಿ ಹಣಕಾಸಿನ ವಿಚಾರ ಚರ್ಚೆಯಾಗಿಲ್ಲ. ಈಡಿ ಅವರು ವಿಚಾರಣೆ ಮಾಡುವಾಗ ಹಣಕಾಸಿನ ಬಗ್ಗೆ ತನಿಖೆ ಮಾಡಬೇಕಾಗುತ್ತದೆ. ಆಗ ಅವರಿಗೆ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಮನದಟ್ಟಾಗುತ್ತದೆ. ನಂತರ ಅವರು ಬಿ ರಿಪೋರ್ಟ್ ಹಾಕಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ. ನನಗೆ ತಿಳಿದ ಪ್ರಕಾರ ಈ ಪ್ರಕರಣ ಸರಕಾರದ ನಡುವೆ ಇರುವ ಪ್ರಕರಣವೇ ಹೊರತು, ಖಾಸಗಿ ವ್ಯಕ್ತಿಗಳ ನಡುವೆ ಇರುವ ಪ್ರಕರಣವಲ್ಲ. ಇಲ್ಲಿ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪವಿಲ್ಲ. ಇಲ್ಲಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮುಡಾ ಆಡಳಿತ ವೈಫಲ್ಯಗಳ ಬಗ್ಗೆ ಮಾತ್ರ ತನಿಖೆಯಾಗಲಿದೆ ಎಂದರು.

ವಾಲ್ಮೀಕಿ ಹಗರಣ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹೆಸರು ಹೇಳಲು ಈಡಿ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂಬ ನಾಗೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈಡಿ, ಆದಾಯ ತೆರಿಗೆ, ಸಿಬಿಐ ಕೇಂದ್ರ ಸರಕಾರದ ಅಸ್ತ್ರವಾಗಿವೆ. ಇವುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಲಾಗುತ್ತಿದೆ. ವಿರೋಧ ಪಕ್ಷಗಳ ಮೇಲೆ ಈ ಸಂಸ್ಥೆಗಳನ್ನು ಪ್ರಯೋಗಿಸುವುದು ಹೊಸತೇನಲ್ಲ. ಕಳೆದ 10 ವರ್ಷಗಳಿಂದ ಇದು ನಡೆದುಕೊಂಡು ಬಂದಿದ್ದು, ಈ ಅವಧಿಯಲ್ಲೂ ಮುಂದುವರಿಯುತ್ತಿದೆ. ಸರಕಾರವನ್ನು ಅಸ್ಥಿರಗೊಳಿಸಲು, ನಾಯಕತ್ವಕ್ಕೆ ಧಕ್ಕೆ ತರಲು ಈ ಪ್ರಯತ್ನ ಮಾಡಲಾಗುತ್ತಿದೆ” ಎಂದು ತಿಳಿಸಿದರು.

Leave A Reply

Your email address will not be published.