ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಟಿ.ದೇವೇಗೌಡರು ಸತ್ಯ ಹೇಳಿದ್ದಾರೆ. ಇದನ್ನೇ ನಾವು ಮೊದಲಿನಿಂದ ಹೇಳಿಕೊಂಡು ಬಂದಿದ್ದೇವೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಗುರುವಾರ ನಗರದ ಗಾಲ್ಫ್ ಕೋರ್ಸ್ ಬಳಿಯಿರುವ ತಮ್ಮ ಸರಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ನಾವು ಹೇಳುತ್ತಲೇ ಇದ್ದೇವೆ. ಇದೀಗ ಜಿ.ಟಿ.ದೇವೇಗೌಡ, ಎಸ್.ಟಿ.ಸೋಮಶೇಖರ್ ಅದಕ್ಕೆ ದನಿ ಗೂಡಿಸಿದ್ದಾರೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ. ಇವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಮುಡಾ ನಿವೇಶನಗಳನ್ನು ವಾಪಸ್ ಮಾಡಿದ ನಂತರವೂ ಬಿಜೆಪಿ ನಾಯಕರು ಮುಖ್ಯಮಂತ್ರಿ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ಪ್ರತಿಪಕ್ಷದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲೊಟ್ಟೆಗೊಲ್ಲಹಳ್ಳಿ ಪ್ರಕರಣದಲ್ಲಿ ನೋಟಿಫೈ ಆಗಿದ್ದ ಜಾಗ ಖರೀದಿಸಿ, ಡಿನೋಟಿಫೈ ಮಾಡಿಸಿಕೊಂಡು ವಿವಾದ ಆದ ನಂತರ ಆರ್.ಅಶೋಕ್ ಬಿಡಿಎಗೆ ವಾಪಸ್ ನೀಡಿದ್ದಾರೆ. ಹಾಗಾದರೆ ಅವರು ರಾಜೀನಾಮೆ ನೀಡಬೇಕಲ್ಲವೇ?. ಇವರಿಗೊಂದು ಕಾನೂನು ನಮಗೆ ಒಂದು ಕಾನೂನು ಇರುತ್ತಾ? ಎಂದು ಪ್ರಶ್ನಿಸಿದ ಅವರು, ನ್ಯಾಯಾಲಯ ತನಿಖೆಗೆ ಅದೇಶಿಸಿದೆ. ರಾಜೀನಾಮೆ ನೀಡಲು ಹೇಳಿಲ್ಲ. ತನಿಖೆ ನಡೆಯಲಿ ಸತ್ಯ ತಿಳಿಯಲಿದೆ ಎಂದರು.