ಬೆಂಗಳೂರು, ಅ.3: ಐವತ್ತು ಕೋಟಿ ರೂ. ನೀಡುವಂತೆ ಒತ್ತಡ ಹೇರಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ರಿಯಲ್ ಎಸ್ಟೇಟ್ ಉದ್ಯಮಿ, ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ʼಉಪಾಧ್ಯಕ್ಷʼ ವಿಜಯ್ ಟಾಟಾ ಪೊಲೀಸ್ ದೂರು ನೀಡಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿರುವ ವಿಜಯ್ ಟಾಟಾ, ವ್ಯವಹಾರಿಕವಾಗಿ ತಾನು ಮುನ್ನಡೆ ಸಾಧಿಸಿದ್ದು, ಇದೀಗ 50 ಕೋಟಿ ರೂ. ನೀಡುವಂತೆ ಕೇಂದ್ರ ಸಚಿವ ಕುಮಾರ ಒತ್ತಡ ಹಾಕುತ್ತಿದ್ದಾರೆ. ಹಣಕ್ಕಾಗಿ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ದೂರಿನಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡರ ಹೆಸರನ್ನೂ ಉಲ್ಲೇಖಿಸಿರುವ ವಿಜಯ್ ಟಾಟಾ, ರಮೇಶ್ ಗೌಡ ಕೂಡ ತನ್ನಿಂದ ಹಣ ಕೀಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅ.1ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕುಮಾರಸ್ವಾಮಿ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದ ವಿಜಯ್ ಟಾಟಾ, ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ್ದ ವಿಜಯ್ ಟಾಟಾ, ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಸ್ನೇಹಿತ ಪರಿಷತ್ ಮಾಜಿ ಸದಸ್ಯ ರಮೇಶ್ಗೌಡ ಅವರ ಮೊಬೈಲ್ ಮೂಲಕ ಕರೆ ಮಾಡಿ, ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಗೆ ನಿಲ್ಲುತ್ತಿರುವುದರಿಂದ 50 ಕೋಟಿ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ದೂರಿದರು.
ಬೇಡಿಕೆ ಇಟ್ಟ ಹಣ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಕ್ಕಾಗಿ, ರಮೇಶ್ ಗೌಡ ಮೂಲಕ ಹಣ ನೀಡಲಿಲ್ಲವೆಂದರೆ ಬೆಂಗಳೂರಿನಲ್ಲಿ ಬದುಕುವುದಕ್ಕೆ ಸಾಧ್ಯವಿಲ್ಲ. ನಿನಗೆ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುವುದಕ್ಕೆ ಸಾಧ್ಯವಾಗದು ಎಂದು ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.