EBM News Kannada
Leading News Portal in Kannada

ಪಿಎಸ್‍ಐ ಪರೀಕ್ಷೆ ಮುಂದೂಡಿಕೆ : ಗೃಹ ಸಚಿವ ಜಿ.ಪರಮೇಶ್ವರ್‌

0


ಬೆಂಗಳೂರು : ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸೆ.22ರ ಬದಲು ಸೆ.28(ಶನಿವಾರ)ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ರಾಜ್ಯದ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದು, ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ. ಮುಖ್ಯ ಪರೀಕ್ಷೆ ಮತ್ತು ಪಿಎಸ್‌ಐ ಪರೀಕ್ಷೆ ಸೆ.22ರಂದು ನಿಗದಿಯಾಗಿರುವುದರಿಂದ ಎರಡು ಪರೀಕ್ಷೆ ಬರೆಯಲು ಆಗುವುದಿಲ್ಲ. ಯಾವುದಾದರು ಒಂದು ಪರೀಕ್ಷೆಯ ಅವಕಾಶ ಕೈತಪ್ಪುತ್ತದೆ. ಹೀಗಾಗಿ ಪಿಎಸ್ಐ ಪರೀಕ್ಷೆ ಮುಂದೂಡುವಂತೆ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದರು” ಎಂದು ತಿಳಿಸಿದರು.

ಅಲ್ಲದೆ, ಬಿಜೆಪಿಯ ನಿಯೋಗವೂ ಮನವಿ ನೀಡಿತ್ತು. ಕೆಇಎ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಡಿಸೆಂಬರ್‌ವರೆಗೆ ಪರೀಕ್ಷೆ ನಡೆಸಲು ದಿನ ಖಾಲಿ ಇಲ್ಲ ಎಂದು ತಿಳಿಸಿದ್ದರು. ಪ್ರಾಥಮಿಕ ಶಿಕ್ಷಣ ಸಚಿವ ಮಂಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ, ಶನಿವಾರದಂದು ಒಂದು ದಿನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ‌ ಮಾಡಿದ್ದೆ. ಪರೀಕ್ಷೆ ನಡೆಸಲು ಶಿಕ್ಷಕರು ಬೇಕಾಗುತ್ತದೆ. ಎಲ್ಲ ಆಕಾಂಕ್ಷಿಗಳ ಮನವಿಗೆ ಮನ್ನಣೆ ಕೊಟ್ಟು, ಅನುಕೂಲವಾಗುವ ನಿಟ್ಟಿನಲ್ಲಿ ಸೆ.28ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಪೇದೆ ನೇಮಕಾತಿಗೆ ವಯೋಮಿತಿ ಹೆಚ್ಚಳದ ಕುರಿತು ಬೇರೆ ರಾಜ್ಯಗಳಿಂದ ಮಾಹಿತಿ ಕಲೆ ಹಾಕಿದ್ದೇವೆ. ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ, ವರದಿಯನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave A Reply

Your email address will not be published.