EBM News Kannada
Leading News Portal in Kannada

33 ಲಕ್ಷಕ್ಕೂ ಅಧಿಕ ರೈತರಿಗೆ ಬೆಳೆ ಪರಿಹಾರ ಒದಗಿಸಿದ್ದೇವೆ : ಸಚಿವ ಕೃಷ್ಣಭೈರೇಗೌಡ

0


ಬೆಂಗಳೂರು : ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದಿನ ಎಲ್ಲಾ ಸರಕಾರಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಪರಿಹಾರವನ್ನು ನೀಡಿದ್ದು, ನಾವು ಈವರೆಗೂ ಒಟ್ಟು 33 ಲಕ್ಷಕ್ಕೂ ಅಧಿಕ ರೈತರಿಗೆ ಪರಿಹಾರ ಒದಗಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಧಾನಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳೆ ಪರಿಹಾರ ನೀಡಬೇಕಾದರೆ ಡಿಜಿಟಲ್ ವ್ಯವಸ್ಥೆಯನ್ನು ಮಾಡಿದ್ದೇವೆ. ಇದಕ್ಕಾಗಿ ವಿಶೇಷವಾದ ಆ್ಯಪ್ ಅನುಷ್ಠಾನ ಮಾಡಲಿದೆ. ರೈತರು ಬೆಳೆ ಬೆಳೆದಿದ್ದಾರೋ, ಇಲ್ಲವೋ ಎಂಬುದನ್ನು ಇದು ಖಾತರಿಪಡಿಸುತ್ತದೆ. ಶೇ.33ಕ್ಕಿಂತಲೂ ಹೆಚ್ಚು ಬೆಳೆನಷ್ಟವಾಗಿದ್ದರೆ ಪರಿಹಾರ ನೀಡುತ್ತೇವೆ ಎಂದರು.

ಸಚಿವರ ಉತ್ತರ ಖಂಡಿಸಿದ ಸದಸ್ಯ ಕೇಶವಪ್ರಸಾದ್, ರಾಜ್ಯಸರಕಾರ ರೈತರ ಬೆಳೆಪರಿಹಾರ ನೀಡುವಲ್ಲಿ ತಾರತಮ್ಯ ಎಸಗಿದ್ದು, ವಿಫಲವಾಗಿದೆ ಎಂದು ದೂರಿದರು. ಇದಕ್ಕೆ ಆಕ್ಷೇಪಿಸಿದ ಕೃಷ್ಣಭೈರೇಗೌಡ, ನೀವು ರಾಜಕೀಯ ಮಾತನಾಡುತ್ತೀರಿ ಎಂದರೆ ನಮಗೂ ಕೂಡ ಮಾತನಾಡಲು ಬರುತ್ತದೆ ಎಂದು ತಿರುಗೇಟು ನೀಡಿದರು.

2023ರಲ್ಲಿ ಕೇಂದ್ರಕ್ಕೆ ಆಂಧ್ರ, ಮಹಾರಾಷ್ಟ್ರದವರು ಪರಿಹಾರ ಕೇಳಿದರೂ ಯಾರಿಗೂ ಕೊಟ್ಟಿಲ್ಲ. ನಾವು ಸುಪ್ರೀಂಕೋರ್ಟ್‌ಗೆ ಹೋಗಿದ್ದಕ್ಕೆ 3,498 ಕೋಟಿ ರೂ. ಪರಿಹಾರ ಸಿಕ್ಕಿದೆ. 4,132 ಕೋಟಿ ರೂ. ಬರಪರಿಹಾರಕ್ಕೆ ಖರ್ಚಾಗಿದೆ. ಇದರಲ್ಲಿ ರಾಜ್ಯದಿಂದಲೂ 1,296 ಕೋಟಿ ರೂ. ಪರಿಹಾರ ಕೊಟ್ಟಿದ್ದೇವೆ. ಕೇಂದ್ರ ಸರಕಾರ ಸರಿಯಾಗಿ ಪರಿಹಾರ ಕೊಟ್ಟಿಲ್ಲ ಎಂದು ಕೃಷ್ಣಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲೂ ಬರಗಾಲ ಬಂದಿದ್ದರೂ ಒಂದೇ ಒಂದು ಪೈಸಾ ಹಣವನ್ನು ನೀಡಲಿಲ್ಲ. ಆದರೆ, ನಾವು ಸುಪ್ರೀಂಕೋರ್ಟ ಕದ ತಟ್ಟಿದ್ದರಿಂದ ವಿಧಿಯಿಲ್ಲದೆ ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನವನ್ನು ಬಿಡುಗಡೆ ಮಾಡಿತು. ಇಲ್ಲದಿದ್ದರೆ ಕರ್ನಾಟಕಕ್ಕೂ ದೊಡ್ಡ ಚೊಂಬು ಸಿಗುತ್ತಿತ್ತು ಎಂದು ಕೃಷ್ಣಭೈರೇಗೌಡ ಕಿಡಿಕಾರಿದರು.

ಈ ವೇಳೆ ಬಿಜೆಪಿಯ ಸಿ.ಟಿ.ರವಿ, ಭಾರತಿ ಶೆಟ್ಟಿ, ಕೇಶವಪ್ರಸಾದ್ ಸೇರಿದಂತೆ ಮತ್ತಿತರರು ಆಕ್ಷೇಪಿಸಿ ಕೇಂದ್ರ ಸರಕಾರವನ್ನು ಎಲ್ಲದಕ್ಕೂ ದೂಷಣೆ ಮಾಡುವುದು ಬೇಡ. 3 ಸಾವಿರ ಕೋಟಿ ರೂ. ಅನುದಾನ ಕೊಟ್ಟಿಲ್ಲವೇ ಎಂದರು.

Leave A Reply

Your email address will not be published.