EBM News Kannada
Leading News Portal in Kannada

‘ಕನ್ನಡಿಗರಿಗೆ ಉದ್ಯೋಗ ಮೀಸಲಾತಿ’ ವಿಧೇಯಕ ಜಾರಿಗೆ ಆಗ್ರಹಿಸಿ ಜು.22ಕ್ಕೆ ಧರಣಿ: ವಾಟಾಳ್ ನಾಗರಾಜ್

0


ಬೆಂಗಳೂರು: ಕನ್ನಡಿಗರ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಧೇಯಕ ಜಾರಿಗೆ ಆಗ್ರಹಿಸಿ ಜು.22ರ ಬೆಳಗ್ಗೆ 11ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಧರಣಿ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಚಾರಕ್ಕೆ ಸುಮ್ಮನಿದ್ದಿದ್ದರೂ ಏನು ಮಾತನಾಡುತ್ತಿರಲಿಲ್ಲ. ವಿಧೇಯಕ ಜಾರಿಗೆ ತರುತ್ತೆವೆಂದು ಹೇಳಿ, ಜನ ಸಂತೋಷ ಪಡುವುದರೊಳಗೆ ಉದ್ಯಮಿಗಳಿಗೆ ಹೆದರಿಕೆಯಿಂದ ಮುಂದಿನ ಸಂಪುಟದಲ್ಲಿ ಚರ್ಚಿಸಿ, ತಿರ್ಮಾನ ಮಾಡಲಾಗುವುದೆಂದು ಹೇಳಿ, ತಡೆಹಿಡಿದಿರುವುದು ಬೇಸರ ಮೂಡಿಸಿದೆ ಎಂದು ಹೇಳಿದರು.

ಉದ್ಯಮಿಗಳಿಗೆ ಭೂಮಿ, ನೀರು, ವಿದ್ಯುತ್ ಕೊಟ್ಟು ಸಾವಿರಾರು ಕೋಟಿ ರೂ.ಸಂಪಾದನೆ ಮಾಡಲು ಅಲ್ಲ. ಕನ್ನಡಿಗರಿಗೆ ಸರೋಜಿನಿ ಮಹಿಷಿ ವರದಿ ಆಧಾರದ ಮೇಲೆ ಇಲ್ಲಿನ ಸ್ಥಳೀಯರಿಗೆ ಉದ್ಯೋಗ ಕೊಡಬೇಕು. ಉದ್ಯಮಿ ಮೋಹನ್‍ದಾಸ್ ಪೈ ಮೊದಲಿದಂದಲೂ ಕನ್ನಡದವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನಾವೆಲ್ಲ ಬಿಟ್ಟು ಹೋಗುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆ. ಸರಕಾರ ಬೆದರಿಕೆಗೆ ಮಣಿದು ವಿಧೇಯಕ ಮಂಡನೆ ಮಾಡದೆ ತಡೆಹಿಡಿದಿರುವುದು ಕನ್ನಡಿಗರಿಗೆ ಮಾಡುವ ಅನ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶಾಸನಸಭೆಯಲ್ಲಿ ವಿಧೇಯಕ ಮಂಡಿಸದಿದ್ದರೆ ಮುಂದಿನ ಗತಿ ಏನು? ಈ ವಿಧೇಯಕ ಸದನದಲ್ಲಿ ಮಂಡನೆ ಆಗುವುದಿಲ್ಲ. ಇದು ಕನ್ನಡಿಗರ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಇದಕ್ಕಾಗಿ ಹೋರಾಟ ಅನಿವಾರ್ಯ. ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು, ಕನ್ನಡದ ಅಭಿಮಾನಿಗಳು, ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಎಲ್ಲ ಸಾಹಿತಿಗಳು ವಿಧೇಯಕ ಮಂಡನೆ ಮಾಡಬೇಕೆಂದು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದರು.

ಕನ್ನಡಿಗರಿಗೆ ಉದ್ಯೋಗ ವಿಧೇಯಕ ಮಂಡನೆ ಮಾಡದಿದ್ದರೆ ಈ ಬಾರಿ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ ನಡೆಸಬೇಡಿ. ಕನ್ನಡ ಆಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಸಾಹಿತಿಗಳು ಸರಕಾರ ನೀಡಿರುವ ಎಲ್ಲ ಪ್ರಶಸ್ತಿಗಳನ್ನು ವಾಪಸ್ಸು ಮಾಡಬೇಕು. ಆ ನಿಟ್ಟಿನಲ್ಲಿ ಉದ್ಯೋಗ ವಿಧೇಯಕ ಜಾರಿಗೆ ಆಗ್ರಹಿಸಿ ಜು.22ರಂದು ನಡೆಯುವ ಹೋರಾಟಕ್ಕೆ ಹೋರಾಟಗಾರರೆಲ್ಲರೂ ಬೆಂಬಲ ನೀಡಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.

Leave A Reply

Your email address will not be published.