EBM News Kannada
Leading News Portal in Kannada

ವಿಧಾನಸೌಧದಲ್ಲಿ ‘ಚೆಸ್ ಹಬ್ಬ’ದ ಸಂಭ್ರಮ

0


ಬೆಂಗಳೂರು: ಬುದ್ಧಿವಂತರ ಆಟ ಎಂದೆ ಪರಿಗಣಿಸಲಾಗಿರುವ ಚದುರಂಗ(ಚೆಸ್)ವನ್ನು ಜನರಿಗೆ ಹೆಚ್ಚು ಪರಿಚಯ ಮಾಡುವ ನಿಟ್ಟಿನಲ್ಲಿ ಇಂದು ವಿಧಾನಸೌಧದಲ್ಲಿ ‘ಚೆಸ್ ಹಬ್ಬ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಶನಿವಾರ ವಿಧಾನಸೌಧದ ಬ್ಯಾಂಕ್ವೇಟ್ ಸಭಾಂಗಣದಲ್ಲಿ ವಿಧಾನಮಂಡಲ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಚೆಸ್ ದಿನಾಚರಣೆ ಅಂಗವಾಗಿ ಸಚಿವರು, ಶಾಸಕರು ಮತ್ತು ಅಧಿಕಾರಿ, ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ‘ವಿಧಾನಸೌಧ ಚೆಸ್ ಹಬ್ಬ’ ವಿಧಾನಸೌಧ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಹಾಗೂ ‘ಲೆಜಿಸ್ಲೇಚರ್ ಕಪ್’ 2024 ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ವರ್ಗದ ಜನರು ಚೆಸ್ ಆಟವನ್ನು ಆಡುತ್ತಾರೆ. ಈ ಕ್ರೀಡೆಗೆ ತನ್ನದೇ ಆದ ಗೌರವವಿದೆ. ದೇಶ ವಿದೇಶದಲ್ಲೂ ಈ ಕ್ರೀಡೆಗೆ ಮನ್ನಣೆ ಇದೆ. ಈ ಆಟ ಆಡಲು ಬುದ್ಧಿವಂತಿಕೆ, ತಾಳ್ಮೆ ಬಹಳ ಮುಖ್ಯ ಇದನ್ನು ಹೆಚ್ಚು ಆಡಿದರೆ ಸಾಮಾನ್ಯರು ಬುದ್ಧಿವಂತರಾಗುತ್ತಾರೆ. ಕೋವಿಡ್ ಸಮಯದಲ್ಲಿ ಬಹಳಷ್ಟು ಜನರು ಚೆಸ್ ಸೇರಿದಂತೆ ಇತರ ಆಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಟದಲ್ಲಿ ಸೋಲು ಗೆಲುವು ಎರಡನ್ನು ಸಮವಾಗಿ ಸ್ವೀಕರಿಸುವ ಮನೋಭಾವವನ್ನು ನಾವು ಬೆಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯದ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಪಿ.ಅನಂತ್ ಮಾತನಾಡಿ, ಇಂದು ಅಂತರರಾಷ್ಟ್ರೀಯ ಚೆಸ್ ದಿನ ಹಾಗೂ ಲೆಜಿಸ್ಲೇಚರ್ ಕಪ್ 2024 ಅನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯ. ನಮ್ಮ ದೇಶದ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಪ್ರಖ್ಯಾತಿ ಪ್ರಶಸ್ತಿಗಳಿಸಿರುವುದು ಹೆಮ್ಮೆಯ ಸಂಗತಿ. ರಾಜ್ಯ ಸರಕಾರಿ ಶಾಲೆಗಳಲ್ಲೂ ಚೆಸ್ ಅನ್ನು ಕಲಿಸಿ ಕೊಡುವ ಕೆಲಸ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕ ಡಾ.ಅಜಯ್ ಸಿಂಗ್, ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಎಂ.ಕೆ ಟೂರ್ನಮೆಂಟ್ ನಿರ್ದೇಶಕಿ ಎಂ.ಎಂ.ಸೌಮ್ಯಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಚೆಸ್ ಗ್ರಾಂಡ್ ಮಾಸ್ಟರ್ ತೇಜ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

Leave A Reply

Your email address will not be published.