EBM News Kannada
Leading News Portal in Kannada

ಲೋಕಸಭಾ ಚುನಾವಣೆಯಲ್ಲಿ ಸೋಲು | ಪರಾಮರ್ಶನೆಗೆ ಸತ್ಯಶೋಧನಾ ಸಮಿತಿ ರಚನೆ : ಡಿ.ಕೆ.ಶಿವಕುಮಾರ್

0


ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಗೆಲ್ಲದೆ ಇರುವ ಕಾರಣಕ್ಕೆ ಸೋಲಿನ ಪರಾಮರ್ಶೆ ನಡೆಸಲು ಸತ್ಯಶೋಧನಾ ಸಮಿತಿ ರಚನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ(ಇಂದಿರಾ ಭವನ)ಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯ ಫಲಿತಾಂಶ ಸಮಾಧಾನಕರವಾಗಿಲ್ಲ. 15ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎನ್ನುವ ನಿರೀಕ್ಷೆ ಸುಳ್ಳಾಗಿದೆ” ಎಂದರು.

ಕಲ್ಯಾಣ ಕರ್ನಾಟಕ ಹೊರತಾಗಿ ಉಳಿದ ಕಡೆ ಪಕ್ಷಕ್ಕೆ ಏಕೆ ಸೋಲಾಯಿತು ಎಂದು ಪರಾಮರ್ಶನೆಗೆ ಒಳಪಡಿಸಲು ಸತ್ಯಶೋಧನ ಸಮಿತಿ ರಚಿಸಲಾಗುವುದು. ಈ ಸಮಿತಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಧ್ಯಯನ ನಡೆಸಿ ವರದಿ ನೀಡಲಿದೆ. ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಮಾತ್ರಗಳಿಸುತ್ತದೆ ಎಂದು ಮಾಧ್ಯಮಗಳ ಹೇಳಿದ್ದವು. ಆದರೆ ನಾವು 9 ಸ್ಥಾನಗಳನ್ನು ಗೆದ್ದೆವು ಎಂದು ಅವರು ಹೇಳಿದರು.

ಈ ಫಲಿತಾಂಶ ನಮಗೆ ಸಮಾಧಾನ ತಂದಿಲ್ಲ. ಇನ್ನು ನಾಲ್ಕೈದು ಸ್ಥಾನಗಳನ್ನು ಗೆಲ್ಲಬಹುದಾಗಿತ್ತು. ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೂ ಏಕೆ ಜನ ಕೈ ಹಿಡಿಯಲಿಲ್ಲ ಎಂದು ಚಿಂತನೆ ಮಾಡಲಾಗುವುದು. ಕರ್ನಾಟಕದಲ್ಲಿ ಮೋದಿ ಅಲೆ ಇರಲಿಲ್ಲ. ನಮ್ಮಲ್ಲಿ ಬಿಜೆಪಿಯವರಂತೆ ಒಳಜಗಳ ಇರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದರೂ ಏಕೆ ಸೋಲಾಯಿತು ಎಂದು ಸತ್ಯಶೋಧನೆ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ವಿಭಾಗವಾರು ನಾಲ್ಕು ಸಭೆಗಳನ್ನು ನನ್ನ ಮತ್ತು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ಎಐಸಿಸಿ ಸತ್ಯಶೋಧನಾ ಸಮಿತಿಯ ಭೇಟಿ: ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿ ರಾಜ್ಯಗಳಿಗೆ ಎಐಸಿಸಿ ಸತ್ಯಶೋಧನಾ ಸಮಿತಿಯ ಭೇಟಿ ನೀಡಲಿದೆ. ಆ ಸಮಿತಿಯು ಪ್ರತಿ ಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯ ಆಗುವುದಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ರಾಜ್ಯದ ವರದಿಯನ್ನು ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಎನ್‍ಡಿಎ ಸರಕಾರದ ಹಗರಣಗಳ ವಿರುದ್ಧ ನಿರ್ಣಯ: ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಮೂರನೇ ಅವಧಿಗೆ ಅಧಿಕಾರ ಹಿಡಿದ ತಕ್ಷಣ ಷೇರು ಪೇಟೆ ಹಗರಣ, ನೀಟ್ ಮತ್ತು ನೆಟ್ ಹಗರಣ ನಡೆಯಿತು. ಇದರ ಕುರಿತು ಖಂಡನಾ ನಿರ್ಣಯ ಅಂಗೀಕಾರ ಮಾಡಲಾಯಿತು ಎಂದು ಶಿವಕುಮಾರ್ ತಿಳಿಸಿದರು.

ಆರು ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳ ಘೋಷಣೆ: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಇದರಿಂದ ಉತ್ತಮ ಸ್ಥಾನಗಳನ್ನು ಗೆಲ್ಲಲಾಯಿತು. ಇದೇ ಸಂಪ್ರದಾಯವನ್ನು ಮುಂದಿನ ದಿನಗಳಲ್ಲಿ ಮುಂದುವರೆಸಲಾಗುವುದು ಎಂದು ಅವರು ಹೇಳಿದರು.

ಉಪಚುನಾವಣೆ ಎದುರಿಸಲು ತಂಡ ರಚನೆ: ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯನ್ನು ಎದುರಿಸಲು ಮೂರು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಶಿಗ್ಗಾವಿ ಕ್ಷೇತ್ರದ ವರದಿ ನೀಡಲಾಗಿದೆ. ಜು.3ರ ನಂತರ ಸಂಡೂರಿನ ವರದಿ ಸಲ್ಲಿಸುತ್ತಾರೆ. ಸಚಿವ ಚಲುವರಾಯಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಕುರಿತು ವರದಿ ನೀಡುತ್ತಾರೆ ಎಂದು ಶಿವಕುಮಾರ್ ತಿಳಿಸಿದರು.

ಶಾಸಕರ ಮನೆಯಲ್ಲಿ ಪಕ್ಷದ ಸಭೆ ನಡೆಸುವಂತಿಲ್ಲ: ಪಕ್ಷದ ಸಭೆಗಳನ್ನು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಶಾಸಕರ ಮನೆಗಳಲ್ಲಿ ನಡೆಸುವಂತಿಲ್ಲ. ಆ ರೀತಿ ಸಭೆ ನಡೆಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. 5 ವರ್ಷ ಹಾಗೂ ಎರಡು ಅವಧಿಗೆ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದವರು ಹಾಗೂ ಸಕ್ರಿಯವಾಗಿ ಇಲ್ಲದೆ ಇರುವವರನ್ನು ಬದಲಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಪಕ್ಷದಲ್ಲಿ ನೂತನ ವಿಭಾಗಗಳ ಪ್ರಾರಂಭ: ಸಾರಿಗೆ, ಕೊಳೆಗೇರಿ, ಸಹಕಾರಿ, ವಾಹನ ಚಾಲಕರ, ಅಪಾರ್ಟ್‍ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ವಿಭಾಗಗಳನ್ನು ಪ್ರಾರಂಭ ಮಾಡಲಾಗುವುದು. ಸಣ್ಣ, ಸಣ್ಣ ಸಮುದಾಯಗಳು ಒಂದಷ್ಟು ಮತಗಳನ್ನು ಹೊಂದಿರುತ್ತವೆ ಇವುಗಳನ್ನು ಒಟ್ಟುಗೂಡಿಸಲು ಸಮಿತಿಗಳು ನೇರವಾಗುತ್ತವೆ. ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಪ್ರತ್ಯೇಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ಪದಾಧಿಕಾರಿಗಳಿಗೆ ಸ್ಥಾನ ನಷ್ಟ: ಪಕ್ಷದಲ್ಲಿ ಶಿಸ್ತು ಮುಖ್ಯ. ಯಾರೂ ಸಹ ಸೂಚನೆಗಳನ್ನು ಉಲ್ಲಂಘಿಸಿ ಬಹಿರಂಗವಾಗಿ ಮಾತನಾಡಬಾರದು. ಸ್ಥಾನ ಪಡೆದುಕೊಂಡಿರುವ ಪದಾಧಿಕಾರಿಗಳು ಜಿಲ್ಲಾ ಹಾಗೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡದೆ, ಸಭೆ ನಡೆಸದೆ ಇದ್ದರೆ ಕ್ರಮತೆಗೆದುಕೊಳ್ಳಲಾಗುವುದು. ಮೂರು ಸಭೆಗಳಿಗೆ ಗೈರುಹಾಜರಾದರೆ ವಿಶ್ರಾಂತಿ ನೀಡಲಾಗುವುದು. ಕೂಡಲೇ ಬೇರೆಯವರಿಗೆ ಅಧಿಕಾರ ನೀಡಲಾಗುವಂತಹ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಎಚ್ಚರಿಸಿದರು.

ಕಾರ್ಯಕರ್ತರ ಭೇಟಿಗೆ ಜಿಲ್ಲಾ ಮಂತ್ರಿಗಳಿಗೆ ಸೂಚನೆ: 15 ದಿನಗಳಿಗೆ ಒಮ್ಮೆ ಜಿಲ್ಲಾ ಕೇಂದ್ರ ಹಾಗೂ ತಿಂಗಳಿಗೆ ಒಮ್ಮೆ ಬೆಂಗಳೂರಿನಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಪಕ್ಷದ ಕಚೇರಿಯಲ್ಲಿ ಇಬ್ಬರು ಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಪರಾಜಿತ ಅಭ್ಯರ್ಥಿಗಳ ಮತ್ತು ಇತರೇ ಪದಾಧಿಕಾರಿಗಳ ಸಭೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಶಿವಕುಮಾರ್ ಹೇಳಿದರು.

Leave A Reply

Your email address will not be published.