EBM News Kannada
Leading News Portal in Kannada

ಬರದ ನಡುವೆಯೂ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ಪೂರೈಕೆ ಮಾಡಲಾಗಿದೆ: ಸಚಿವ ಕೆ.ಜೆ. ಜಾರ್ಜ್

0


ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ಮಳೆ ಕೊರತೆ, ಜಲಾಶಯಗಳಲ್ಲಿ ಕಡಿಮೆಯಾದ ನೀರಿನ ಲಭ್ಯತೆ ಮಧ್ಯೆಯೂ ಕಳೆದ ಬೇಸಿಗೆಯಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲದೆ, ರೈತರು, ವಿದ್ಯಾರ್ಥಿ ಸಮುದಾಯಕ್ಕೆ ಹೆಚ್ಚು ಸಮಸ್ಯೆಯಾಗದಂತೆ ವಿದ್ಯುತ್ ಪೂರೈಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಖರೀದಿಯಿಂದ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳಲು ಅನ್ಯ ರಾಜ್ಯಗಳೊಂದಿಗೆ ವಿದ್ಯುತ್ ವಿನಿಮಯ ಮಾಡಿಕೊಳ್ಳಲಾಗಿತ್ತು. ಅಲ್ಲದೇ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆ, ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಜಾರಿಗೊಳಿಸಿ ರಾಜ್ಯದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದಕರು ರಾಜ್ಯ ಗ್ರಿಡ್‍ಗೆ ವಿದ್ಯುತ್ ನೀಡುವಂತೆ ನೋಡಿಕೊಳ್ಳುವ ಮೂಲಕ ಬೇಸಿಗೆಯ ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗಿದೆ ಎಂದರು.

ವಿದ್ಯುತ್ ಖರೀದಿ ಹೊರತಾಗಿ ರಾಜ್ಯದ 3 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಳೆದ ವರ್ಷ ಗರಿಷ್ಠ 22 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೊರತೆಯಿಂದ ಆಗಸ್ಟ್ ತಿಂಗಳಿನಿಂದಲೇ ಬೇಸಿಗೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಮೊದಲೇ ಮುನ್ನೆಚ್ಚರಿಕೆ ವಹಿಸಿದ ಪರಿಣಾಮ ಬೇಸಿಗೆಯಲ್ಲಿ ಹೆಚ್ಚು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದರು. ಅದಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಮಧ್ಯೆ ದಿನವೊಂದಕ್ಕೆ ದಾಖಲೆಯ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಗೂ ಈ ಬೇಸಿಗೆ ಸಾಕ್ಷಿಯಾಗಿತ್ತು ಎಂದು ಜಾರ್ಜ್ ನುಡಿದರು.

ಮಾ.12ರಂದು ಅತಿ ಹೆಚ್ಚಿನ ಬೇಡಿಕೆ ಅಂದರೆ 17,220 ಮೆ.ವ್ಯಾ. ಇತ್ತು. ಅದೇ ರೀತಿ ಎ.5ರಂದು ಅತಿ ಹೆಚ್ಚು ಅಂದರೆ 332 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾದ ದಿನವಾಗಿತ್ತು. ಇದು ಇಂಧನ ಇಲಾಖೆಯಲ್ಲಿ ದಾಖಲೆಯ ವಿದ್ಯುತ್ ಪೂರೈಕೆಯಾಗಿದೆ ಎಂದು ಅವರು ವಿವರಿಸಿದರು.

ವಿದ್ಯುತ್ ವಿನಿಮಯಕ್ಕೆ ಒತ್ತು: ಪಂಜಾಬ್ ಮತ್ತು ಉತ್ತರ ಪ್ರದೇಶದೊಂದಿಗೆ ಕಳೆದ ಸಾಲಿನ ನವೆಂಬರ್ ನಿಂದ ಪ್ರಸಕ್ತ ಸಾಲಿನ ಮೇ ತಿಂಗಳವರೆಗೂ ವಿದ್ಯುತ್ ವಿನಿಮಯದ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ವಿದ್ಯುತ್ ಪೂರೈಸಲಾಗಿದೆ. ಇದೇ ಜೂ.16ರಿಂದ ಈ ಎರಡೂ ರಾಜ್ಯಗಳಿಗೆ ವಿದ್ಯುತ್ ಹಿಂತಿರುಗಿಸಲಾಗುತ್ತದೆ. ಇದರಿಂದಾಗಿ ವಿದ್ಯುತ್ ಖರೀದಿಯ ಅಗತ್ಯ ಕಡಿಮೆಯಾಗಿತ್ತು ಎಂದು ಅವರು ತಿಳಿಸಿದರು.

ಗರಿಷ್ಠ ವಿದ್ಯುತ್ ಉತ್ಪಾದನೆ: ಈ ಬಾರಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 2 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಎಪ್ರಿಲ್ ನಲ್ಲಿ 2,400 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, ಇದು ದಾಖಲೆಯಾಗಿದೆ ಎಂದು ಜಾರ್ಜ್ ಹೇಳಿದರು.

ಆರ್‍ಟಿಪಿಎಸ್ ವಿದ್ಯುತ್ ಘಟಕಗಳಿಂದ ನಿಗದಿತ ಗುರಿ ಮೀರಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಆಗಿದೆ. ದಿನಕ್ಕೆ 210 ಮೆಗಾವ್ಯಾಟ್ ಸಾಮಥ್ರ್ಯದ 3ನೇ ವಿದ್ಯುತ್ ಘಟಕದಲ್ಲಿ ಎ.4ರಂದು 216 ಮೆಗಾವ್ಯಾಟ್ ಉತ್ಪಾದನೆ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಆರ್‍ಟಿಪಿಎಸ್‍ನ ಎಳು ವಿದ್ಯುತ್ ಘಟಕಗಳು ಸೇರಿ ಶೇ.85ರಷ್ಟು ವಿದ್ಯುತ್ ಉತ್ಪಾದಿಸಿವೆ ಎಂದು ಅವರು ಹೇಳಿದರು.

ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್) 2023-24 ಹಣಕಾಸು ವರ್ಷದಲ್ಲಿ 6229.250 ದಶಲಕ್ಷ ಯೂನಿಟ್ ಉತ್ಪಾದಿಸಿದೆ. ಇದು ಈವರೆಗಿನ ಗರಿಷ್ಠ ಉತ್ಪಾದನೆ. ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ 6 ಸಾವಿರ ದಶಲಕ್ಷ ಯೂನಿಟ್ ಗುರಿಯನ್ನು ವೈಟಿಪಿಎಸ್ ಮೀರಿದೆ. ಇನ್ನು ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರ 8208.476 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದೆ. ಸ್ಥಾವರ ಕಾರ್ಯಾರಂಭ ಮಾಡಿದ ನಂತರ ಸಾಧಿಸಿದ ಅತ್ಯಧಿಕ ಉತ್ಪಾದನೆಯ ದಾಖಲೆ ಇದಾಗಿದೆ ಎಂದು ಜಾರ್ಜ್ ತಿಳಿಸಿದರು.

ಕಲ್ಲಿದ್ದಲು ಕೊರತೆ ಇಲ್ಲ: ಉಷ್ಣ ವಿದ್ಯುತ್ ಸ್ಥಾವರಗಳು ನಿರೀಕ್ಷೆ ಮೀರಿ ವಿದ್ಯುತ್ ಉತ್ಪಾದಿಸಲು ಮುಖ್ಯ ಕಾರಣ ಕಲ್ಲಿದ್ದಲು ಸಮಸ್ಯೆ ಎದುರಾಗದಂತೆ ನೋಡಿಕೊಂಡಿದ್ದು. ಕೇಂದ್ರ ಸರಕಾರದ ಜತೆ ಸಮನ್ವಯ ಸಾಧಿಸಿ ಅಗತ್ಯ ಕಲ್ಲಿದಲ್ಲು ಸಂಗ್ರಹವಾಗುವಂತೆ ನೋಡಿಕೊಳ್ಳುವುದರೊಂದಿಗೆ, ವಿದೇಶಿ ಕಲ್ಲಿದ್ದಲು ಮಿಶ್ರಣ ಮಾಡಿ ಹೆಚ್ಚಿನ ಉತ್ಪಾದನೆಗೆ ಗಮನಹರಿಸಲಾಗಿತ್ತು ಎಂದು ಅವರು ಹೇಳಿದರು.

Leave A Reply

Your email address will not be published.