ಬೆಂಗಳೂರು: ಕೆಲಸದಿಂದ ತೆಗೆದು ಹಾಕಿ ಸಂಬಳ ನೀಡಿಲ್ಲವೆಂದು ಆಕ್ರೋಶಗೊಂಡ ಮಾಜಿ ಉದ್ಯೋಗಿಗಳು ಖಾಸಗಿ ಕಂಪೆನಿಯೊಂದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಸೆ.27ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಮಾಶಂಕರ್ ಮತ್ತು ರೂಪ ಎಂಬುವವರ ಒಡೆತನದ ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪೆನಿಯಲ್ಲಿ ಆರೋಪಿ ರಾಹುಲ್ ಪೂಜಾರಿ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಇನ್ನೋರ್ವ ಆರೋಪಿ ಲ್ಯಾವ್‍ಸನ್ ಪೀಟರ್ ಜಾನ್ ರೀಜಿನಲ್ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ. ಈ ಇಬ್ಬರು ಟಾರ್ಗೆಟ್ ರೀಚ್ ಮಾಡಿಲ್ಲ ಎಂದು ಕಂಪೆನಿ ಈ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಿತ್ತು ಎನ್ನಲಾಗಿದೆ.
ಬಳಿಕ, ಕಂಪೆನಿಯ ಮಾಲಕಿ ರೂಪಾ ಅವರಿಗೆ ರಾಹುಲ್ ಮತ್ತು ಲ್ಯಾವ್‍ಸನ್ ಕರೆ ಮಾಡಿ ಸಂಬಳ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ರೂಪ ಮತ್ತು ಉಮಾಶಂಕರ್ ಸಂಬಳ ನೀಡಲು ನಿರಾಕರಿಸಿದ್ದಾರೆ. ಇದಕ್ಕೆ ಕೋಪಗೊಂಡ ಆರೋಪಿಗಳು ಸೆ.27 ರಂದು ಬೆಳಗ್ಗೆ 10.30ಕ್ಕೆ ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪೆನಿಗೆ ಬಂದಿದ್ದಾರೆ. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಮುನ್ನಿ ಎಂಬಾಕೆಯನ್ನು ಹೊರಗೆ ಬರುವಂತೆ ಹೇಳಿ, ಪೆಟ್ರೋಲ್ ಸುರಿದು ಕಂಪೆನಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಕಂಪೆನಿಯಲ್ಲಿದ್ದ ಟೇಬಲ್, ಸ್ವಿಚ್ ಬೋರ್ಡ್, ಇತರೆ ಪೀಠೋಪಕರಣಗಳು ಸೇರಿದಂತೆ ಒಟ್ಟು 11 ಲಕ್ಷ ರೂ. ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ ಎಂದು ಹೇಳಲಾಗಿದೆ. ಈ ಘಟನೆ ಸಂಬಂಧ ಪುಟ್ಟೇನಹಳ್ಳಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎಂದು ಗೊತ್ತಾಗಿದೆ.