EBM News Kannada
Leading News Portal in Kannada

ಜೆಡಿಎಸ್ ಮುಸ್ಲಿಮ್ ಸಮಾಜ ಒಂದನ್ನೇ ನಂಬಿಕೊಂಡು ಕುಳಿತಿಲ್ಲ: ಎಚ್​.ಡಿ. ಕುಮಾರಸ್ವಾಮಿ

0



ಬೆಂಗಳೂರು: ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್​​ನಿಂದ ಮುಸ್ಲಿಮ್ ಮುಖಂಡರು ದೂರ ಸರಿಯುತ್ತಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಜಕ ಎಚ್​.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾದ್ಯಮವೊಂದಕ್ಕೆ ವಿಶೇಷ ಸಂದರ್ಶನ ನೀಡಿರುವ ಕುಮಾರಸ್ವಾಮಿ, ಮುಸ್ಲಿಮ್ ಸಮುದಾಯದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಂತರ ಮುಸ್ಲಿಮ್ ನಾಯಕರು ಪಕ್ಷದಿಂದ ದೂರ ಸರಿಯುತ್ತಿದ್ದಾರಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‌ʼʼಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕೂತಿಲ್ಲ. ಅದೊಂದು ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ.ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿಯಾಗಿ ನಮ್ಮ ಪಕ್ಷವಿದೆʼʼ ಎಂದು ಹೇಳಿದ್ದಾರೆ.

ʼʼ2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲೂ ನಮ್ಮನ್ನು ಮುಸ್ಲಿಮ್‌ ಸಮುದಾಯ ಬೆಂಬಲಿಸಿಲ್ಲ. ಹಿಜಾಬ್ ವಿವಾದ,‌ ವ್ಯಾಪಾರ ಬಹಿಷ್ಕಾರ, ಹಲಾಲ್ ಕಟ್ ವಿವಾದ ಆದಾಗ ಮುಸ್ಲಿಮ್ ಸಮುದಾಯದ ಬೆನ್ನಿಗೆ ನಿಂತಿದ್ದೇ ಜೆಡಿಎಸ್. ಆವಾಗ ಕಾಂಗ್ರೆಸ್‌ ನಾಯಕರು ಎಲ್ಲಿ ಹೋಗಿದ್ದರು? ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಆ ಸಮುದಾಯದ ಪರ ಧ್ವನಿ ಎತ್ತಿದ್ದೆವು. ಆವಾಗಲೂ ಕಾಂಗ್ರೆಸ್ ಚಕಾರ ಎತ್ತಿರಲಿಲ್ಲ. ಇಷ್ಟೆಲ್ಲ ಆದರೂ ಅವರು (ಮುಸ್ಲಿಮರು) ನಮ್ಮನ್ನು ಬೆಂಬಲಿಸಲಿಲ್ಲ. ಯಾವ ಕಾರಣಕ್ಕಾಗಿ ಅವರು ಜೆಡಿಎಸ್‌ ಅನ್ನು ವಿರೋಧಿಸುತ್ತಿದ್ಧಾರೆ?ʼʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ʼʼಈ ಸರಕಾರ ಜಾಸ್ತಿ ದಿನ ಇರುವುದಿಲ್ಲʼʼ

ʼʼಮುಂದೆ ಈ ಸರಕಾರ ಜಾಸ್ತಿ ದಿನ ಇರುವುದಿಲ್ಲ. ನನ್ನ ಸರಕಾರ ತೆಗೆದರಲ್ಲ, ಅದೇ ರೀತಿ ಈ ಸರಕಾರ ಉರುಳುತ್ತೆ ಎಂದ ಕುಮಾರಸ್ವಾಮಿ, .ಆವಾಗ ಮುಸ್ಲಿಮ್ ಸಮಾಜದವರಿಗೆ ರಕ್ಷಣೆ ಕೊಡುವುದು ಯಾರು? ಕಾಂಗ್ರೆಸ್​ನವರು ಬರುತ್ತಾರೆಯೇ? ಮತ್ತೆ ಇದೇ ಕುಮಾರಸ್ವಾಮಿ ಬೇಕಾಗಬಹುದು ಅವರಿಗೆ (ಮುಸ್ಲಿಮ್‌ ಸಮುದಾಯಕ್ಕೆ)ʼʼ ಎಂದು ಹೇಳಿದ್ದಾರೆ.

”ಯಾರು ಬೇಕಾದರೂ ರಾಜೀನಾಮೆ ಕೊಡಲಿ”

”ಯಾರು ಬೇಕಾದರೂ ರಾಜೀನಾಮೆ ಕೊಡಲಿ, ಅದನ್ನು ಇಟ್ಟುಕೊಳ್ಳುವವರು ಯಾರು? ಹೋಗುವವರು ಹೋಗಲಿ. ನಾನು ಯಾವುದೇ ಒಂದು ಸಮಾಜದ ಪ್ರತಿನಿಧಿಯಲ್ಲ. ನಮ್ಮ ಸಮಾಜ, ಒಕ್ಕಲಿಗ ಸಮಾಜ ನನಗೆ ಬೆಂಬಲ ಕೊಟ್ಟಿರಬಹುದು. ಹಾಗೆಂದು ನಾನು ಅದೊಂದು ಸಮಾಜದ ಪ್ರತಿನಿಧಿಯಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿ. ರಾಜ್ಯದ ಒಳಿತಿಗಾಗಿ ಕ್ರಮ ಕೈಗೊಳ್ಳುತ್ತೇನೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Leave A Reply

Your email address will not be published.