ಹೊಸದಿಲ್ಲಿ: ಸುದ್ದಿ ವಾಹಿನಿಗಳ ಮೇಲೆ ನಿಗಾ ಇಡುವ ಸ್ವಯಂ ನಿಯಂತ್ರಣ ಕಾರ್ಯವಿಧಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮಾಧ್ಯಮಗಳಿಗೆ ಸ್ವಯಂ-ನಿಯಂತ್ರಕ ಕಾರ್ಯವಿಧಾನದ ಕುರಿತು ಬಾಂಬೆ ಹೈಕೋರ್ಟ್ ನ ಕೆಲವು ಅವಲೋಕನಗಳನ್ನು ಪ್ರಶ್ನಿಸಿ ನ್ಯೂಸ್ ಬ್ರಾಡ್ ಕಾಸ್ಟರ್ಸ್ ಹಾಗೂ ಡಿಜಿಟಲ್ ಅಸೋಸಿಯೇಶನ್ ನ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯಪಟ್ಟಿದೆ.
ನ್ಯೂಸ್ ಬ್ರಾಡ್ ಕಾಸ್ಟರ್ಸ್ ಹಾಗೂ ಡಿಜಿಟಲ್ ಅಸೋಸಿಯೇಶನ್ ನ ನೇತೃತ್ವವನ್ನು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರು ವಹಿಸಿದ್ದಾರೆ. ಇದು 27 ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳ ಪ್ರಸಾರಕರನ್ನು ಅದರ ಸದಸ್ಯರನ್ನಾಗಿ ಹೊಂದಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರದ ಪ್ರಸಾರವನ್ನು ಉಲ್ಲೇಖಿಸುವಾಗ, 2021 ರಲ್ಲಿ ಹೈಕೋರ್ಟ್ ಮಾಧ್ಯಮ ವಿಚಾರಣೆಗಳು ನ್ಯಾಯಾಲಯದ ನಿಂದನೆಯಾಗಿದೆ ಎಂದು ಹೇಳಿತ್ತು.
ಮಾಧ್ಯಮ ವಿಚಾರಣೆಗಳು ತನಿಖೆ ಹಾಗೂ ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ಕಾರಣವಾಗಬಹುದು ಎಂದು ಹೇಳಿತ್ತು. ಅಸ್ತಿತ್ವದಲ್ಲಿರುವ ಸ್ವಯಂ ನಿಯಂತ್ರಣ ಕಾರ್ಯವಿಧಾನವು ಶಾಸನಬದ್ಧ ಚೌಕಟ್ಟಿನೊಳಗೆ ಪಾವಿತ್ರ್ಯತೆಯನ್ನು ಹೊಂದಿಲ್ಲ ಎಂದು ದ್ವಿಸದಸ್ಯ ಪೀಠವು ಹೇಳಿತ್ತು.
‘’ಮಾಧ್ಯಮವನ್ನು ನಿಯಂತ್ರಿಸುವ ಸರಕಾರದ ಬಗ್ಗೆ ನ್ಯಾಯಾಲಯವು ಜಾಗರೂಕವಾಗಿದೆ ಹಾಗೂ ಪೂರ್ವ-ಸೆನ್ಸಾರ್ಶಿಪ್ ಅಥವಾ ನಂತರದ ಸೆನ್ಸಾರ್ಶಿಪ್ ಅನ್ನು ಬಯಸುವುದಿಲ್ಲ ಅದೇ ಸಮಯದಲ್ಲಿ, ಸ್ವಯಂ ನಿಯಂತ್ರಣ ಕಾರ್ಯವಿಧಾನವು ಪರಿಣಾಮಕಾರಿಯಾಗಿರಬೇಕು” ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೋಮವಾರ ಹೇಳಿದ್ದಾರೆ.