ತಲಪಾಡಿ ಗ್ರಾ.ಪಂ. ಚುನಾವಣೆ: ಬಿಜೆಪಿ ಬೆಂಬಲಿತ ಸದಸ್ಯರಿಂದ ಎಸ್ಡಿಪಿಐಗೆ ದಕ್ಕಿದ ಅಧ್ಯಕ್ಷ ಸ್ಥಾನ – Kannada News | Mangaluru Talapady Grama Panchayat Elections SDPI gets president’s post with support from BJP members
ಬಿಜೆಪಿಯ ತತ್ವ ಸಿದ್ಧಾಂತ ಹಾಗೂ ಎಸ್ಡಿಪಿಐ ತತ್ವ ಸಿದ್ಧಾಂತವೇ ಬೇರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದಾಗಿ ಅಧ್ಯಕ್ಷ ಸ್ಥಾನ ಎಸ್ಡಿಪಿಐ ಪಾಲಾಗಿದೆ.
ಬಿಜೆಪಿ ಬೆಂಬಲಿತ ಸದಸ್ಯರ ಅಡ್ಡ ಮತದಾನದಿಂದ ತಪಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಎಸ್ಡಿಪಿಐ ಪಾಲು
ಮಂಗಳೂರು, ಆಗಸ್ಟ್ 10: ಬಿಜೆಪಿ ತತ್ವ ಸಿದ್ಧಾಂತ ಮತ್ತು ನಿಷೇಧಿತ ಪಿಎಫ್ಐ ರಾಜಕೀಯ ಪಕ್ಷ ಎಸ್ಡಿಪಿಐ (SDPI) ತತ್ವ ಸಿದ್ಧಾಂತವೇ ಬೇರೆ. ಆದರೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ (Talapady) ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವು ಬಿಜೆಪಿ (BJP) ಬೆಂಬಲಿತ ಸದಸ್ಯರ ಅಡ್ಡಮತದಾನದಿಂದ ಎಸ್ಡಿಪಿಐ ಪಾಲಾಗಿದೆ.
13 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 10 ಎಸ್ಡಿಪಿಐ ಬೆಂಬಲಿತ ಸದಸ್ಯರು ಹಾಗೂ ಏಕೈಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಇರುವ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ.
ಅಧ್ಯಕ್ಷ ಸ್ಥಾನದ ಚುನಾವಣೆ ಮತ ಎಣಿಕೆ ವೇಳೆ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು ಎಸ್ಡಿಪಿಐಗೆ ಅಡ್ಡ ಮತದಾನ ಹಾಕಿರುವುದು ತಿಳಿದುಬಂದಿದೆ. ಬಿಜೆಪಿ ಹಾಗೂ ಎಸ್ಡಿಪಿಐ ಸಮಬಲ ಸಾಧಿಸಿದ ಹಿನ್ನೆಲೆ ಅಧ್ಯಕ್ಷ ಸ್ಥಾನ ಯಾರಿಗೆ ಎಂಬ ಕುತೂಹಲವನ್ನೂ ಕೆರಳಿಸಿತು. ನಂತರ ನಡೆದ ಚೀಟಿ ಎತ್ತುವಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಎಸ್ಡಿಪಿಐ ಬೆಂಬಲಿತ ಸದಸ್ಯನಿಗೆ ಒಲಿದೆ.
ಅದರಂತೆ, ತಲಪಾಡಿ ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿ ಎಸ್ಡಿಪಿಐ ಬೆಂಬಲಿತ ಟಿ.ಇಸ್ಮಾಯಿಲ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬೆಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಏಕೈಕ ಸದಸ್ಯ ಹಾಗೂ ಎಸ್ಡಿಪಿಐ ಬೆಂಬಲಿತ ಓರ್ವ ಸದಸ್ಯ ಗೈರಾಗಿದ್ದರೂ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಎಸ್ಡಿಪಿಐ ಗೆದ್ದುಕೊಂಡಿತು.