ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಂಡ ಕರ್ನಾಟಕದ ಮಾಜಿ ಸಿಎಂ ವಿಶೇಷ ಅಧಿಕಾರಿ – Kannada News | Karnataka’s Former CM’s OSD Falls in honey trap loses rs 6.8 lakh
ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿ 6.8 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ಸೇವೆ ಸಲ್ಲಿಸಿದ್ದ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿ 6.8 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಂ (Cyber Crime) ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾಗಿರುವ 58 ವರ್ಷದ ಅಧಿಕಾರಿ ಜೂ.12 ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಅತಿಥಿ ಗೃಹದಲ್ಲಿ ತಂಗಿದ್ದರು. ಅಂದು ಸ್ನಾನದ ನಂತರ ಬಚ್ಚಲು ಮನೆಯಿಂದ ಹೊರ ಬಂದ ಕೂಡಲೇ ವಿಡಿಯೋ ಕರೆಯೊಂದು ಬಂದಿದೆ. ಈ ಕರೆಗೆ ಉತ್ತರಿಸಿದ್ದಾರೆ. ಇವರು ವಿಡಿಯೋ ಕಾಲ್ನಲ್ಲಿ ಮಾತನಾಡಿದನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದಾರೆ.
ಘಟನೆ ನಡೆದ ಮರುದಿನ ಅಧಿಕಾರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಆದರೆ ಅಧಿಕಾರಿ ಕರೆಯನ್ನು ಸ್ವೀಕರಿಸಲಿಲ್ಲ. ಮತ್ತೆ ಮರುದಿನ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮತ್ತೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ನಾನು ಮಹೇಂದ್ರ ಸಿಂಗ್, ರಾಷ್ಟ್ರೀಯ ಹಿಂದಿ ಸುದ್ದಿ ವಾಹಿನಿಯೊಂದರ ವರದಿಗಾರ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ನೀವು ಮಹಿಳೆಯೊಂದಿಗೆ ವೀಡಿಯೊ ಕಾಲ್ನಲ್ಲಿ ಅನುಚಿತವಾಗಿ ವರ್ತಿಸಿದ್ದೀರಿ. ಈ ವಿಡಿಯೋ ನಮಗೆ ಲಭ್ಯವಾಗಿದೆ ಎಂದು ಹೇಳಿದ್ದಾನೆ.
ನಂತರ ಈ ವಿಡಿಯೋವನ್ನು ಯೂಟ್ಯೂಬ್ ಮತ್ತು ಫೇಸ್ಬುಕ್ನಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನೆ. ಸಮಾಜಿಕ ಜಾಲತಾಣದಲ್ಲಿ ವೈರಲ್ ಮಾಡದಿರಲು ನಾವು ಕೇಳಿದಷ್ಟು ಹಣ ನೀಡು ಎಂದಿದ್ದಾನೆ. ಹಣ ಪಡೆದ ನಂತರ ವಿಡಿಯೋ ಡಿಲೀಟ್ ಮಾಡುವುದಾಗಿ ಸಿಂಗ್ ಹೇಳಿದ್ದಾನೆ. ಅದರಂತೆ ಅಧಿಕಾರಿ ಆತ ಕೇಳಿದಷ್ಟು ಹಣ ನೀಡಲು ಆರಂಭಿಸಿದ್ದಾರೆ.
ಅಧಿಕಾರಿ ಮೊದಲು 1.5 ಲಕ್ಷ ರೂ. ನಂತರ 50 ಸಾವಿರ ರೂ.ಗಳನ್ನು ಆರೋಪಿ ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಮತ್ತೆ ಜು.14 ರಂದು ಪದೇ ಪದೇ ಕರೆ ಮಾಡಿ ಎರಡು ಪ್ರತ್ಯೇಕ ಬ್ಯಾಂಕ್ ಖಾತೆಗಳಿಗೆ 2 ಲಕ್ಷ ರೂ. ಹಾಗೂ 2.8 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾನೆ. ಒಟ್ಟು 6.8 ಲಕ್ಷ ರೂ. ಅನ್ನು ಅಧಿಕಾರಿಯಿಂದ ವಂಚಕರು ಸುಲಿಗೆ ಮಾಡಿದ್ದಾರೆ.
ಅದೇ ದಿನ ಮತ್ತೆ ಕರೆ ಮಾಡಿ 7.2 ಲಕ್ಷ ರೂ. ನೀಡುವಂತೆ ಹೇಳಿದಾಗ, ಅಧಿಕಾರಿ ನಗರ ಪೊಲೀಸ್ ಕಮಿಷನರ್ ಅವರಿಗೆ ತಿಳಿಸಿ, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ