EBM News Kannada
Leading News Portal in Kannada

ಬಾಲಿವುಡ್ ನಲ್ಲಿ ಒಗ್ಗಟ್ಟು, ಗೌರವದ ಕೊರತೆ ಇದೆ: ನಟ ಅಕ್ಷಯ್ ಕುಮಾರ್

0


ಹೊಸದಿಲ್ಲಿ: ಬಾಲಿವುಡ್ ನಲ್ಲಿ ಒಗ್ಗಟ್ಟು ಮತ್ತು ಗೌರವದ ಕೊರತೆ ಇದೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದರೆ, ಮತ್ತೊಬ್ಬ ಬಾಲಿವುಡ್ ನಟ ಅಜಯ್ ದೇವಗನ್, ದಕ್ಷಿಣ ಭಾರತದ ತಾರೆಯರ ನಡುವಿನ ಒಗ್ಗಟ್ಟನ್ನು ಶ್ಲಾಘಿಸಿದ್ದಾರೆ.

ಶನಿವಾರ ಮುಕ್ತಾಯಗೊಂಡ ʼHindustan Times Leadership Summit 2024ʼನಲ್ಲಿ ಪಾಲ್ಗೊಂಡು ಮಾತನಾಡಿದ ಈ ಇಬ್ಬರು ನಟರು, ಬಾಲಿವುಡ್ ಹೇಗೆ ದಕ್ಷಿಣ ಭಾರತದ ನಾಲ್ಕು ಚಿತ್ರೋದ್ಯಮಗಳಿಂದ ಭಿನ್ನವಾಗಿದೆ ಎಂಬುದರತ್ತ ಗಮನ ಸೆಳೆದರು.

ʼಹಿಂದೂಸ್ತಾನ್ ಟೈಮ್ಸ್ʼ ಸುದ್ದಿ ಸಂಸ್ಥೆಯ ಮನರಂಜನೆ ಮತ್ತು ಜೀವನ ಶೈಲಿ ವಿಭಾಗದ ಮುಖ್ಯ ವ್ಯವಸ್ಥಾಪಕ ಸಂಪಾದಕ ಸೊನಾಲ್ ಕಲ್ರಾರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ನಟ, ನಿರ್ಮಾಪಕ ಅಕ್ಷಯ್ ಕುಮಾರ್ ಹಾಗೂ ನಟ, ನಿರ್ಮಾಪಕ ಹಾಗೂ ಉದ್ಯಮಿ ಅಜಯ್ ದೇವಗನ್ ಬಾಲಿವುಡ್ ನಲ್ಲಿನ ಒಗ್ಗಟ್ಟಿನ ಕುರಿತು ಬೇಸರ ವ್ಯಕ್ತಪಡಿಸಿದರು.

ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗಗಳನ್ನು ಒಳಗೊಂಡಿರುವ ದಕ್ಷಿಣ ಭಾರತದ ಚಿತ್ರೋದ್ಯಮದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್ ಕುಮಾರ್, ಬಾಲಿವುಡ್ ಗಿಂತ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಹೆಚ್ಚು ಒಗ್ಗಟ್ಟಿದೆ ಹಾಗೂ ಉತ್ತಮವಾಗಿ ನಡೆಯುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಅಕ್ಷಯ್ ಕುಮಾರ್ ಮಾತನ್ನು ಅನುಮೋದಿಸಿದ ಅಜಯ್ ದೇವಗನ್, “ನನಗೂ ಹಾಗೇ ಅನ್ನಿಸುತ್ತದೆ ಹಾಗೂ ಅದನ್ನೇ ನಾನು ಯಾವಾಗಲೂ ಚರ್ಚಿಸುತ್ತಿರುತ್ತೇನೆ. ಇದು ಚಿತ್ರಗಳ ಆರಂಭಕ್ಕೆ ಸಂಬಂಧಿಸಿದ್ದಲ್ಲ. ಆದರೆ, ದಕ್ಷಿಣ ಭಾರತ ಚಿತ್ರೋದ್ಯಮದ ಜನರು ಹೇಗೆ ಒಗ್ಗಟ್ಟಾಗಿರುತ್ತಾರೆ ಹಾಗೂ ಒಂದು ಉದ್ಯಮವಾಗಿ ಪರಸ್ಪರರ ನೆರವಿಗೆ ನಿಲ್ಲುತ್ತಾರೆ ಎಂಬುದಕ್ಕೆ ಸಂಬಂಧಿಸಿದ್ದು. ಆದರೆ, ಮುಂಬೈ ಆ ಒಗ್ಗಟ್ಟಿನ ಕೊರತೆ ಅನುಭವಿಸುತ್ತಿದೆ ಎಂದು ನನಗೆ ಅನ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಇದೇ ವೇಳೆ, “90ರ ದಶಕದ ನಟರು ಪರಸ್ಪರರಿಗೆ ನೆರವಾಗುತ್ತಿದ್ದರು ಹಾಗೂ ಬಿಕ್ಕಟ್ಟುಗಳನ್ನು ತಡೆಯುತ್ತಿದ್ದರು. 90ರ ದಶಕದ ನಾನು, ಅಕ್ಷಯ್ ಕುಮಾರ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್ ಹಾಗೂ ಇನ್ನಿತರರು ಯಾವುದೇ ಬಗೆಯ ಸಂಕಷ್ಟ ಅಥವಾ ಬಿಕ್ಕಟ್ಟಿಗೆ ಸಿಲುಕಿರಲಿಲ್ಲ. ನಾವು ಪರಸ್ಪರರ ನೆರವಿಗೆ ನಿಲ್ಲುತ್ತಿದ್ದೆವು. ನಮ್ಮ ನಡುವೆ ಎಂದಿಗೂ ಬಿಕ್ಕಟ್ಟು ಉದ್ಭವಿಸಲಿಲ್ಲ” ಎಂದೂ ಅವರು ಹೇಳಿದರು.

ಇತ್ತೀಚೆಗೆ ಬಿಡುಗಡೆಗೊಂಡಿರುವ ರೋಹಿತ್ ಶೆಟ್ಟಿ ಅವರ ‘ಸಿಂಗಮ್ ಅಗೈನ್’ ಚಲನಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಒಟ್ಟಾಗಿ ಕಾಣಿಸಿಕೊಂಡಿದ್ದು, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸು ಗಳಿಸಿದೆ. ಈ ಚಿತ್ರ ಇವರೆಗೆ ವಿಶ್ವಾದ್ಯಂತ ರೂ. 300 ಕೋಟಿಗೂ ಹೆಚ್ಚು ಆದಾಯ ಗಳಿಸಿದೆ ಎಂದು ವರದಿಯಾಗಿದೆ.

Leave A Reply

Your email address will not be published.