ತಿರುವನಂತಪುರಂ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ನಿವಿನ್ ಪೌಲಿಗೆ ನಿರಾಳರಾಗಿದ್ದು, ವಿಶೇಷ ತನಿಖಾ ತಂಡವು ಅವರಿಗೆ ಕ್ಲೀನ್ ಚಿಟ್ ನೀಡಿದೆ.
ತನಿಖೆಯ ವೇಳೆ ಆರೋಪಿತ ಘಟನೆಯ ಸಮಯ ಮತ್ತು ದಿನಾಂಕದಂದು ಪೌಲಿ ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಇದರಿಂದಾಗಿ ಪ್ರಕರಣದ 6ನೇ ಆರೋಪಿ ನಿವಿನ್ ಪೌಲಿಯನ್ನು ಆರೋಪಿಗಳ ಪಟ್ಟಿಯಿಂದ ಕೈಬಿಟ್ಟು ಉಳಿದ ಆರೋಪಿಗಳ ಹೆಸರಿರುವ ವರದಿಯನ್ನು ಎರ್ನಾಕುಲಂನ ಕೋತಮಂಗಲಂನಲ್ಲಿರುವ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.
ಆಗಸ್ಟ್ 6, 2024ರಂದು ಒನ್ನುಕಲ್ ಪೊಲೀಸ್ ಠಾಣೆಯಲ್ಲಿ ನಿವಿನ್ ಪೌಲಿ ಬಗ್ಗೆ ಲೈಂಗಿಕ ದೌರ್ಜನ್ಯ ಆರೋಪಿಸಿ ಮಹಿಳೆ ಪ್ರಕರಣ ದಾಖಲಿಸಿದ್ದರು. ಪೌಲಿ ವಿದೇಶದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಆದರೆ ನಿವಿನ್ ಪೌಲಿ ಆರೋಪವನ್ನು ತಳ್ಳಿ ಹಾಕಿದ್ದು, ಲೈಂಗಿಕ ಕಿರುಕುಳದ ದೂರು ತನ್ನ ವಿರುದ್ಧದ ಪಿತೂರಿಯ ಭಾಗವಾಗಿದೆ ಎಂದು ಹೇಳಿದ್ದರು.
ನಿವಿನ್ ಅವರ ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್ ವ್ಯವಹಾರ ಸೇರಿದಂತೆ ಪ್ರಯಾಣದ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ. ಆದರೆ ದೂರಿನಲ್ಲಿ ಇರುವ ಮಾಹಿತಿಗೂ ದಾಖಲೆಗಳಿಗೂ ಹೋಲಿಕೆಯಾಗುತ್ತಿಲ್ಲ. ಘಟನೆ ನಡೆಯುವ ವೇಳೆ ನಿವಿನ್ ಸ್ಥಳದಲ್ಲಿದ್ದರು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ತನಿಖಾಧಿಕಾರಿ ಹೇಳಿದ್ದಾರೆ.