ಹಾರರ್ ಸಿನಿಮಾ ಎಂದರೆ ಭೂತ, ಕತ್ತಲೆಯ ದೃಶ್ಯಗಳ ಚಿತ್ರಣ ಮಾತ್ರವಲ್ಲ, ಅದು ವಾಸ್ತವಕ್ಕೆ ಹತ್ತಿರವಾದ ಯಾವುದಾದರೂ ಗಂಭೀರ ವಿಷಯವಿದ್ದರೂ ಕೂಡಾ ನಿಮ್ಮನ್ನು ಬೆಚ್ಚಿಬೀಳಿಸಬಹುದು. ಅಂತಹದೇ ಒಂದು ಹೊಸ ಚಿತ್ರ CTRL. ನೀವು ವೀಕ್ಷಿಸಿದ ಸಾಮಾನ್ಯ ಹಾರರ್ ಸಿನಿಮಾದಂತಿಲ್ಲ, ಟೆಕ್ ಲೋಕವೇ ಹೇಗೆ ನಮ್ಮ ಬದುಕಿನಲ್ಲಿ ಅತಿ ದೊಡ್ಡ ಹಾರರ್ ಆಗಿಬಿಡಬಲ್ಲದು ಎಂಬುದು ಇಲ್ಲಿ ತೆರೆದುಕೊಳ್ಳುತ್ತದೆ.
ಈ ಸಿನಿಮಾದ ಕಥೆ ತಂತ್ರಜ್ಞಾನಮಯ ಅವಲಂಬನೆಯ ಅಪಾಯಗಳನ್ನು ತೋರಿಸುತ್ತದೆ. 21ನೇ ಶತಮಾನದಲ್ಲಿ ನಾವು ನಮ್ಮಿಂದ ಬೇರ್ಪಡಿಸಿಕೊಳ್ಳಲಿಕ್ಕಾಗದ ವಿಷಯ ತಂತ್ರಜ್ಞಾನ. ಅದು ನಮ್ಮ ದಿನನಿತ್ಯದ ಜೀವನವನ್ನೇ ವಶಪಡಿಸಿಕೊಂಡಿದೆ. CTRL ಸಿನಿಮಾ ನಾವು ತಂತ್ರಜ್ಞಾನವನ್ನು ಹೇಗೆ ನಮ್ಮ ಸ್ವಾತಂತ್ರ್ಯದ ವಿರುದ್ಧ ಬಳಸಿಕೊಳ್ಳುತ್ತೇವೆ, ಅದರೊಂದಿಗೆ ಏನೆಲ್ಲಾ ಗಂಭೀರ ಸಮಸ್ಯೆಗಳಿಗೂ ತುತ್ತಾಗುತ್ತೇವೆ ಎಂಬುದನ್ನು ವಿವರಿಸುತ್ತದೆ.
ನಾವು ಸಾಮಾನ್ಯವಾಗಿ ಈ ಎಲ್ಲಾ ಅಪಾಯಗಳ ಬಗ್ಗೆ ಕೇಳುವಾಗ, ಕೋಟ್ಯಂತರ ಜನರಲ್ಲಿ ನನ್ನನ್ನೇ ಯಾರು ಗುರಿಯಾಗಿಸುತ್ತಾರೆ ಎಂದು ಅಂದುಕೊಳ್ಳುತ್ತೇವೆ. ಈ ಚಿತ್ರ ನೋಡಿದ ಬಳಿಕ ನೀವು ಈ ಪ್ರಶ್ನೆ ಕೇಳುವ ರೀತಿಯೇ ಬದಲಾಗಬಹುದು. ಇನ್ಮುಂದೆ ಈ ರೀತಿ ಅಪಾಯಕ್ಕೆ ಸಿಲುಕುವವನು ನಾನೇ ಆಗಿದ್ದರೆ ಎಂದು ನೀವು ಪ್ರಶ್ನಿಸುವಿರಿ.
ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ ನೆಟ್ ಫ್ಲಿಕ್ಸ್ ನಲ್ಲಿರುವ ಸಿನೆಮಾದ ಸಂಕ್ಷಿಪ್ತ ಕಥೆ ಹೀಗಿದೆ. ಅನನ್ಯಾ ಪಾಂಡೆ ಅಭಿನಯಿಸಿರುವ ನೆಲ್ಲಾ ಮತ್ತು ವಿಹಾನ್ ಸಮತ್ ಅಭಿನಯಿಸಿರುವ ಜೋ ಕಾಲೇಜಿನಲ್ಲಿ ಭೇಟಿ ಆಗಿ ಪ್ರೇಮದಲ್ಲಿ ಬೀಳುವ ಪಾತ್ರಗಳು. ತಮ್ಮ ಪ್ರತಿ ಕ್ಷಣದ ಚಿತ್ರಣವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅವರು ವೀಕ್ಷಕರ ಪ್ರೀತಿಗೆ ಪಾತ್ರರಾಗಿ ಇನ್‌ಫ್ಲುಯೆನ್ಸರ್‌ಗಳಾಗಿ ಉದ್ಯೋಗ ಪ್ರಾರಂಭಿಸುತ್ತಾರೆ. ಆದರೆ, ಮತ್ತೆ ಇಬ್ಬರ ನಡುವೆ ಬ್ರೇಕ್ ಅಪ್ ಆಗುತ್ತೆ.
ಇದಾದ ನಂತರ, ಮಾತನಾಡಲು ಅಂತ ಯಾರೂ ಇಲ್ಲದೆ ಹೋದಾಗ ನೆಲ್ಲಾ CTRL ಎಂಬ AI ಅಪ್ಲಿಕೇಶನ್‌ನ್ನು ಬಳಸಿ, ಅದರೊಂದಿಗೆ ತನ್ನ ಜೀವನದ ಪ್ರತಿಯೊಂದು ಮಾಹಿತಿಯನ್ನು ಹಂಚಿಕೊಳ್ಳುತ್ತಾಳೆ. ಅಲ್ಲಿಂದ ಶುರುವಾಗುತ್ತೆ ಅಪಾಯ. ನೆಲ್ಲಾ ಗೆ ತಿಳಿಯದೇ ನೆಲ್ಲಾಳ ಡಿವೈಸ್ ಮೇಲೆ ಸಂಪೂರ್ಣ ಕಂಟ್ರೋಲ್ CTRL ಕೈಯಲ್ಲಿರುತ್ತೆ. ಯಾವ ಮೆಸೇಜ್ ಡಿಲೀಟ್ ಮಾಡಬೇಕು. ಯಾವುದಕ್ಕೆ ಉತ್ತರ ನೀಡಬೇಕು. ಎಲ್ಲವನ್ನೂ CTRL ನಿರ್ಧರಿಸುತ್ತೆ.
ಇದೆಲ್ಲದರ ಮಧ್ಯೆ ಮಂತ್ರಾ ಅನ್‌ಲಿಮಿಟೆಡ್ ಹೆಸರಿನ ಕಂಪನಿಯೊಂದು ಡೇಟಾ ಕದಿಯುತ್ತಿರುವುದನ್ನು ಕಂಡು ಹಿಡಿದ ಜೋ ಕೊಲ್ಲಲ್ಪಡುತ್ತಾನೆ. ಇದು ನೆಲ್ಲಾಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತದೆ. ನೆಲ್ಲಾಳ ಸಂಪೂರ್ಣ ವೈಯಕ್ತಿಕ ಮಾಹಿತಿ CTRL ಅಪ್ಲಿಕೇಶನ್‌ನ ಕೈಗೆ ಬಿದ್ದು, ಅವಳ ಜೀವನವೇ ಅದರ ನಿಯಂತ್ರಣಕ್ಕೆ ಒಳಗಾಗುತ್ತದೆ. ಜೋ ಹತ್ಯೆ ಹಿಂದೆ ನೆಲ್ಲಾ ಕೈವಾಡವಿದೆ ಎಂದು ಜೋ ಹೇಳುವ ಫೇಕ್ ವಿಡಿಯೋ ಒಂದು ವೈರಲ್ ಆಗುತ್ತೆ. ಚಿತ್ರವು ತಂತ್ರಜ್ಞಾನದ ಭಯಾನಕತೆಯನ್ನು ಹೀಗೆ ತೀವ್ರವಾಗಿ ಬಿಚ್ಚಿಡುತ್ತದೆ.
app ಗಳಲ್ಲಿ ಅನುಮತಿಗಳನ್ನು ನೀಡುವಾಗ ಜಾಗರೂಕತೆ ಪಾಲಿಸಬೇಕಾಗಿದೆ. ನಮ್ಮ ಡೇಟಾ ಕದಿಯಲು ಹೇಗೆ ನಮ್ಮ ಅನುಮತಿಗಳಿಂದಲೇ ಸಾಧ್ಯವಾಗುತ್ತದೆ ಎಂಬುದನ್ನು ಸಿನಿಮಾ ವಿವರಿಸುತ್ತದೆ. ನಮ್ಮ ಅನುಮತಿಗಳು, ಬುದ್ಧಿಹೀನವಾಗಿ ಎಲ್ಲೆಡೆ ‘terms and conditions’ ಒಪ್ಪುವುದೇ ಇದಕ್ಕೆ ಕಾರಣ ಎಂಬುದನ್ನು ಸಿನೆಮಾ ತೋರಿಸುತ್ತದೆ.
AI ಚಾಟ್‌ಬಾಟ್‌ಗಳ ಅಪಾಯವನ್ನು ಚಿತ್ರದಲ್ಲಿ ಬಹಳ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ನೆಲ್ಲಾ ತನ್ನ ಒಂಟಿತನವನ್ನು ನೀಗಿಸಲು CTRL ಬಳಕೆ ಮಾಡುವುದರ ಮೂಲಕ, AI ಚಾಟ್‌ಬಾಟ್‌ಗಳ ಅಪಾಯವನ್ನು ತನ್ನ ಮೇಲೆಳೆದುಕೊಳ್ಳುತ್ತಾಳೆ. ನಮ್ಮ ಖಾಸಗಿ ಮಾಹಿತಿಯನ್ನು ವಾಸ್ತವಕ್ಕಿಂತ ಹೆಚ್ಚು ತಿಳಿದಿರುವ AI ಗಳು, ನಮ್ಮವರಂತೆ ವರ್ತಿಸುವ ಸಾಧ್ಯತೆ ಬಹುದೊಡ್ಡದು. ಇದರಿಂದಾಗಿ ತೆರೆದುಕೊಳ್ಳುವ ಅಪಾಯವೂ ದೊಡ್ಡದು ಮತ್ತು ಇದರಿಂದ ಉಂಟಾಗಬಹುದಾದ ಆಪಾಯಗಳನ್ನು ಸಿನೆಮಾ ಬಹಳ ಚೆನ್ನಾಗಿ ತೋರಿಸಿದೆ.
ಮನುಷ್ಯರು ಉತ್ಪನ್ನವಲ್ಲ ಎಂಬ ಸಂದೇಶವು ಸಿನಿಮಾದಲ್ಲಿ ಬಹಳ ಸ್ಪಷ್ಟವಾಗಿದೆ. ದೊಡ್ಡ MNC ಗಳು, ನಮ್ಮ ಡೇಟಾ ಕಲೆಹಾಕಿ ತಮ್ಮದೇ ಮಾರಾಟದ ಉತ್ಪನ್ನವನ್ನಾಗಿ ನಮ್ಮನ್ನು ಪರಿವರ್ತಿಸುತ್ತವೆ ಎಂಬುದನ್ನು ಚಿತ್ರ ಸೂಚಿಸುತ್ತದೆ.
ಡೀಪ್ ಫೇಕ್ಸ್ ಮತ್ತು ನಕಲಿ ಸಾಕ್ಷ್ಯ ಸಮಸ್ಯೆಯು ಸಿನೆಮಾದ ಮುಖ್ಯ ಭಾಗವಾಗಿದೆ. ನಕಲಿ ವಿಡಿಯೋಗಳ ಮೂಲಕ ನಮ್ಮನ್ನು ಹೇಗೆ ನಾವು ಮಾಡದ ಅಪಾರಾಧಗಳಲ್ಲಿ ಸಿಲುಕಿಸಬಹುದು ಎಂಬುದನ್ನು ಸಿನೆಮಾ ಚೆನ್ನಾಗಿ ತೋರಿಸಿದೆ. ಇಂತಹ ತಂತ್ರಜ್ಞಾನವು ಯಾರನ್ನಾದರೂ ತಪ್ಪಾಗಿ ಆರೋಪಿಸಲು ಸಹಾಯ ಮಾಡಬಹುದು. ಜಾಮೀನು ನೀಡಲು ನ್ಯಾಯಾಲಯಗಳು ಹಿಂಜರಿಯುತ್ತಿರುವ ಈ ಕಾಲದಲ್ಲಿ ಈ ರೀತಿ ವಿಡಿಯೋಗಳು ತುಂಬಾ ಅಪಾಯಕಾರಿ. ಸಿನೆಮಾ ನೋಡುತ್ತಿದ್ದಂತೆ ನಮಗೆ ನೆನಪಾದದ್ದು ಭೀಮಾ ಕೋರೆಗಾವ್ ಕೇಸ್. ಹೇಗೆ ಮಾನವ ಹಕ್ಕು ಹೋರಾಟಗಾರರ ಲ್ಯಾಪ್ಟಾಪ್ ಹ್ಯಾಕ್ ಮಾಡಿ ಪುರಾವೆ ತುರುಕಿಸಲಾಗಿತ್ತು ಎಂಬುದನ್ನು ಚಿತ್ರ ನೆನಪಿಸುತ್ತದೆ.
ಇನ್ನು ಸಿನೆಮಾ ಭಾರತದಲ್ಲಿ ಬೆಳೆಯುತ್ತಿರುವ ಕಾರ್ಪೊರೇಟ್ ಹಸಿವನ್ನು ಕುರಿತು ನಾವು ವಹಿಸಬೇಕಾದ ಜಾಗರೂಕತೆಯ ಕುರಿತು ನೇರವಾಗಿ ಹೇಳದೆಯೇ ಹೇಳಿದಂತೆ ಕಾಣುತ್ತಿದೆ. ಹೇಗೆ ಕಂಪೆನಿಗಳು ತಂತ್ರಜ್ಞಾನ, ಫಾಶನ್, ಆರೋಗ್ಯ ಎಲ್ಲದರಲ್ಲೂ ನುಗ್ಗಲು ಪ್ರಯತ್ನಿಸುತ್ತವೆ ಎಂಬುದನ್ನು ಸಿನೆಮಾ ತೋರಿಸುತ್ತದೆ.
ಅನನ್ಯಾ ಪಾಂಡೆ ನಟನೆಯಲ್ಲಿ ಮಿಂಚಿದ್ದಾರೆ. ತಂತ್ರಜ್ಞಾನದ ದಾಸಳಾಗಿರುವ ನೆಲ್ಲಾ ಪಾತ್ರದಲ್ಲಿ, ಅನನ್ಯಾ ಯುವಜನರ ಮನಸನ್ನು ಮುಟ್ಟುತ್ತಾರೆ.
ಚಿತ್ರವು ತಂತ್ರಜ್ಞಾನ ಹೇಗೆ ನಮ್ಮ ಮೇಲೆ ಹಿಡಿತ ಸಾಧಿಸುತ್ತದೆ ಎಂಬುದನ್ನು ಅತ್ಯಂತ ಭಾವನಾತ್ಮಕವಾಗಿ ತೋರಿಸುತ್ತದೆ. ಕೆಲವೊಮ್ಮೆ ಕಥೆಯ ನಿರ್ವಹಣೆಯಲ್ಲಿ ಆಳವಿಲ್ಲದ ಕಾರಣಕ್ಕೆ ವಿಮರ್ಶಕರಿಂದ ಟೀಕೆಗೊಳಗಾದರೂ, CTRL ನಮಗೆ ಒಂದು ದೊಡ್ಡ ಸಂದೇಶವನ್ನು ನೀಡುತ್ತದೆ—ಅಂತರ್ಜಾಲದ ಬದುಕನ್ನು ಬಿಟ್ಟು, ವಾಸ್ತವದಲ್ಲಿ ಬದುಕಲು ಸಿನೆಮಾ ಹೇಳುತ್ತದೆ.