EBM News Kannada
Leading News Portal in Kannada

Jio – Facebook Deal: ಫೇಸ್​ಬುಕ್-ಜಿಯೋ ಒಪ್ಪಂದದಿಂದ ಭಾರತದ ಡಿಜಿಟಲ್ ವ್ಯವಸ್ಥೆಗೆ ಭರ್ಜರಿ ಲಾಭ: ಬಿಐಎಫ್

0

ನವದೆಹಲಿ(ಏ. 27): ರಿಲಾಯನ್ಸ್ ಜಿಯೋದಲ್ಲಿ ಶೇ. 9.99ರಷ್ಟು ಪಾಲು ಗಳಿಸುವ ಮೂಲಕ ಭಾರತೀಯ ಡಿಜಿಟಲ್ ಕ್ಷೇತ್ರದಲ್ಲಿ ಫೇಸ್​ಬುಕ್ ಸಂಸ್ಥೆ 5.7 ಬಿಲಿಯನ್ ಡಾಲರ್ (43.6 ಸಾವಿರ ಕೋಟಿ ರೂ) ಹಣ ಹೂಡಿಕೆ ಮಾಡಿರುವ ಬೆಳವಣಿಗೆಯನ್ನು ಬ್ರಾಡ್​ಬ್ಯಾಂಡ್ ಇಂಡಿಯಾ ಫೋರಂ ಸ್ವಾಗತ ಮಾಡಿದೆ. ಫೇಸ್​ಬುಕ್ ಮತ್ತು ಜಿಯೋ ನಡುವಿನ ಈ ಒಪ್ಪಂದವು ಭಾರತೀಯ ಡಿಜಿಟಲ್ ಲೋಕಕ್ಕೆ ಹೊಸ ಮೈಲಿಗಲ್ಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಕೋವಿಡ್ ಬಿಕ್ಕಟ್ಟಿನ ಮಧ್ಯೆ ಆಗಿರುವ ಈ ಒಪ್ಪಂದ ಬಹಳ ಮಹತ್ವದ್ದು ಎಂದು ಬಿಐಎಫ್ ಹೇಳಿದೆ.

ಭಾರತದಲ್ಲಿ ಬ್ರಾಡ್​ಬ್ಯಾಂಡ್ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕಾರ್ಯತಂತ್ರ ರೂಪಿಸುವ ಬಿಐಎಫ್ ಸಂಸ್ಥೆ ಇಂದು ಹೇಳಿಕೆ ಬಿಡುಗಡೆ ಮಾಡಿದ್ದು, ಜಿಯೋ-ಫೇಸ್​ಬುಕ್ ಒಪ್ಪಂದದಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಿದೆ.

ಈ ಒಪ್ಪಂದದಿಂದ ದೇಶಾದ್ಯಂತ 5 ಕೋಟಿಗೂ ಹೆಚ್ಚು ಸಣ್ಣ, ಮಧ್ಯಮ ಮತ್ತು ಅತಿಸಣ್ಣ ಉದ್ಯಮಗಳಿಗೆ ಲಾಭವಾಗುತ್ತದೆ. 10 ಕೋಟಿ ರೈತರು, 3 ಕೋಟಿ ಸಣ್ಣ ವ್ಯಾಪಾರಸ್ಥರಿಗೂ ಅನುಕೂಲವಾಗುತ್ತದೆ. ಅಸಂಘಟಿತ ವಲಯದಲ್ಲಿರುವ ಕೋಟ್ಯಂತರ ವ್ಯವಹಾರಗಳಿಗೂ ಲಾಭವಾಗುತ್ತದೆ ಎಂದು ಬ್ರಾಡ್​ಬ್ಯಾಂಡ್ ಇಂಡಿಯಾ ಫೋರಂ ಅಭಿಪ್ರಾಯಪಟ್ಟಿದೆ.

ಜಿಯೋಮಾರ್ಟ್ ಮತ್ತು ವಾಟ್ಸಾಪ್ ಮಧ್ಯೆ ಸಹಭಾಗಿತ್ವದಿಂದ ಹೊಸ ವ್ಯವಹಾರ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಸ್ಥಳೀಯ ಉದ್ಯಮ, ಮಳಿಗೆ, ದಿನಸಿ ಅಂಗಡಿಗಳು ಹಾಗೂ ಗ್ರಾಹಕರ ಮಧ್ಯೆ ಹೊಸ ಮಾದರಿಯ ಸೇತು ನಿರ್ಮಾಣವಾಗಬಹುದು. ಸ್ಥಳೀಯ ಮಟ್ಟದಲ್ಲಿ ಉತ್ಪನ್ನಗಳ ಮಾರಾಟ, ಸರಬರಾಜು ಇತ್ಯಾದಿ ಕೆಲಸಗಳು ಹೆಚ್ಚು ಸುಗಮಗೊಳ್ಳುತ್ತವೆ ಎಂದು ಬಿಐಎಫ್ ಹೇಳಿದೆ.

ಭಾರತದಲ್ಲಿ ಫೇಸ್​ಬುಕ್ ಹೂಡಿಕೆ ಮಾಡಿರುವುದರಿಂದ ನೆಟ್ ನ್ಯೂಟ್ರಾಲಿಟಿ ಮತ್ತು ಡೇಟಾ ರಕ್ಷಣೆಗೆ ಕುತ್ತು ಬರಬಹುದು ಎಂಬ ಆತಂಕವನ್ನು ಬಿಐಎಫ್ ತಳ್ಳಿಹಾಕಿದೆ. ನೆಟ್ ನ್ಯೂಟ್ರಾಲಿಟಿಗೆ ಧಕ್ಕೆಯಾಗುತ್ತದೆಂಬುದು ಸತ್ಯಕ್ಕೆ ದೂರವಾದುದು. ಟಿಎಸ್​ಪಿ ಪರವಾನಿಗೆಯ ವೇಳೆಯೇ ನೆಟ್ ನ್ಯೂಟ್ರಾಲಿಟಿ ನಿಯಮ ಬರುತ್ತದೆ. ಹಾಗಾಗಿ, ಅದರ ಉಲ್ಲಂಘನೆ ಸಾಧ್ಯವಿಲ್ಲ. ಡೇಟಾ ರಕ್ಷಣೆ ನಿಯಮ ಕೂಡ ಶಾಸನವಾಗಿ ಹೊರಹೊಮ್ಮಲಿದೆ. ಹೀಗಾಗಿ, ಗ್ರಾಹಕರು ತಮ್ಮ ದತ್ತಾಂಶ ಕಳುವಿನ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಾಡ್​ಬ್ಯಾಂಡ್ ಇಂಡಿಯಾ ಫೋರಂನ ಅಧ್ಯಕ್ಷ ಟಿ.ವಿ. ರಾಮಚಂದ್ರನ್, ಫೇಸ್​ಬುಕ್-ಜಿಯೋ ಒಪ್ಪಂದದಿಂದ ಜಾಗತಿಕ ಹೂಡಿಕೆದಾರರ ಕಣ್ಣಿಗೆ ಭಾರತ ಆಕರ್ಷಕವಾಗುವಂತೆ ಮಾಡಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.