ರೆಪೋ ದರದಲ್ಲಿ ಬದಲಾವಣೆ ಇಲ್ಲ; ಯಥಾಸ್ಥಿತಿ ಮುಂದುವರಿಸಲು ಆರ್ಬಿಐ ನಿರ್ಧಾರ – Kannada News | RBI Monetary Policy Committee Decision, Repo and Reverse Repo Rates Maintained, See More Details
RBI Governor Shaktikanta Das Announcement: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರಲ್ಲಿ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ರೆಪೋ ದರ ಶೇ. 6.5ರಲ್ಲಿ ಮುಂದುವರಿಯಲಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್
ನವದೆಹಲಿ, ಆಗಸ್ಟ್ 10: ನಿರೀಕ್ಷೆಯಂತೆ ಆರ್ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್ಬಿಐನ ಬಡ್ಡಿದರ ಶೇ. 6.50ರಲ್ಲೇ ಮುಂದುವರಿಯಲಿದೆ. ಆಗಸ್ಟ್ 8ರಿಂದ ನಡೆದಿದ್ದ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ (ಮಾನಿಟರಿ ಪಾಲಿಸಿ ಕಮಿಟಿ) ಸಭೆ ಇಂದು ಮುಕ್ತಾಯಗೊಂಡ ಬೆನ್ನಲ್ಲೇ ಅದರ ಗವರ್ನರ್ ಶಕ್ತಿಕಾಂತ ದಾಸ್ ಆ ಸಭೆಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್, ರೆಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ರಿವರ್ಸ್ ರೆಪೋ ಇತ್ಯಾದಿ ಇತರ ದರಗಳಲ್ಲೂ ಯಾವುದೇ ವ್ಯತ್ಯಯವಾಗಿಲ್ಲ.
ಏನಿದು ರೆಪೋ ದರ?
ರೆಪೋ ಎಂದರೆ ರೀಪರ್ಚೇಸಿಂಗ್ ಆಪ್ಷನ್. ಅಂದರೆ ಮರುಖರೀದಿ ಆಯ್ಕೆ. ಬ್ಯಾಂಕುಗಳಿಗೆ ತುರ್ತು ಅಗತ್ಯಬಿದ್ದಾಗ ಅಥವಾ ಫಂಡಿಂಗ್ ಕೊರತೆ ಇದ್ದಾಗ ಆರ್ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್ಬಿಐ ವಿಧಿಸುವ ಬಡ್ಡಿಯೇ ರೆಪೋ ದರ. ರೆಪೋ ದರವನ್ನು ಆರ್ಬಿಐನ ಬಡ್ಡಿದರ ಎಂದೂ ಕರೆಯಲಾಗುತ್ತದೆ.
ಇನ್ನು, ರಿವರ್ಸ್ ರಿಪೋ ಎಂಬುದು ಇದರ ತಿರುವುಮುರುವು. ಬ್ಯಾಂಕುಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಬೇಕಾದರೆ ಆರ್ಬಿಐನಲ್ಲಿ ಠೇವಣಿಯಾಗಿ ಇರಿಸಬಹುದು. ಇದಕ್ಕೆ ಆರ್ಬಿಐ ನೀಡುವ ಬಡ್ಡಿದರವೇ ರಿವರ್ಸ್ ರೆಪೋ.
ಆರ್ಬಿಐ ಬಡ್ಡಿದರ ಹೆಚ್ಚಿಸಿದರೆ ಬ್ಯಾಂಕುಗಳು ಅದಕ್ಕೆ ಅನುಗುಣವಾಗಿ ತಮ್ಮ ಗ್ರಾಹಕರಿಗೆ ಅದರ ಲಾಭ ಅಥವಾ ನಷ್ಟವನ್ನು ವರ್ಗಾಯಿಸಬಹುದು. ಆದರೆ, ಅದು ಬ್ಯಾಂಕುಗಳ ಆಯ್ಕೆ.
ಹಣದುಬ್ಬರ ಎಷ್ಟಾಗಬಹುದು?
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪ್ರಕಾರ, ಭಾರತದಲ್ಲಿ ಈ ಹಣಕಾಸು ವರ್ಷದಲ್ಲಿ (2023-24) ಸಿಪಿಐ ಹಣದುಬ್ಬರ ಶೇ. 5.625 ಆಗಬಹುದು. ಮುಂದಿನ ಹಣಕಾಸು ವರ್ಷದಲ್ಲಿ (2024-25) ಹಣದುಬ್ಬರ ಶೇ. 5.2ರಷ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ.
ಆರ್ಬಿಐ ಹಣದುಬ್ಬರ ಸದ್ಯ ಉತ್ತಮ ಸ್ಥಿತಿಯಲ್ಲಿದೆ. ಈ ಬಾರಿ ಮುಂಗಾರು ಉತ್ತಮವಾಗಿರುವುದರಿಂದ ಆಹಾರ ಕೊರತೆ ಎದುರಾಗದು. ಆದರೆ, ಹೆಡ್ಲೈನ್ ಇನ್ಫ್ಲೇಶನ್ ಸದ್ಯೋಭವಿಷ್ಯದಲ್ಲಿ ಏರಿಕೆ ಆಗಬಹುದು ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.
2023-24ರ ಹಣಕಾಸು ವರ್ಷಕ್ಕೆ ಹಣದುಬ್ಬರದ ತ್ರೈಮಾಸಿಕ ಅಂದಾಜು
ಕ್ವಾರ್ಟರ್ 1: 5.4%
ಕ್ವಾರ್ಟರ್ 2: 6.2%
ಕ್ವಾರ್ಟರ್ 3: 5.7%
ಕ್ವಾರ್ಟರ್ 4: 5.2%
ಶೇ. 6.5ರಷ್ಟು ಜಿಡಿಪಿ ಬೆಳೆಯುವ ಅಂದಾಜು
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಎಂಪಿಸಿ ಸಭೆಯ ಅಂದಾಜನ್ನು ಪ್ರಕಟಿಸಿದ್ದಾರೆ. ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಗರಿಷ್ಠ ದರದಲ್ಲಿ ಬೆಳೆದರೆ ಕೊನೆಯ ಕ್ವಾರ್ಟರ್ ತುಸು ದುರ್ಬಲ ಬೆಳವಣಿಗೆ ಕಾಣಲಿದೆ.
ಜಿಡಿಪಿ ದರ ಅಂದಾಜು (2023-24ರಲ್ಲಿ)
ಒಟ್ಟು ಜಿಡಿಪಿ ದರ: ಶೇ. 6.5
ಕ್ವಾರ್ಟರ್ 1: 6.8%
ಕ್ವಾರ್ಟರ್ 2: 6.5%
ಕ್ವಾರ್ಟರ್ 3: 6.0%
ಕ್ವಾರ್ಟರ್ 4: 5.7%
Published On – 10:09 am, Thu, 10 August 23