ಆತ್ಮಹತ್ಯೆ ಮಾಡಿಕೊಂಡ ರೈತ, ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ
ಬೆಂಗಳೂರು: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತರು ಹಾಗೂ ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮಹತ್ವದ ನಿರ್ಧಾರವನ್ನು ಬೆಂಗಳೂರು ಉತ್ತರ ವಿವಿ ಕೈಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ವಿವಿ ಕುಲಪತಿ ಪ್ರೊ. ಟಿ.ಡಿ.ಕೆಂಪರಾಜು ‘‘ಆತ್ಮಹತ್ಯೆ ಮಾಡಿಕೊಂಡ ರೈತ ಹಾಗೂ ಹುತಾತ್ಮ ಯೋಧರ ಮಕ್ಕಳಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್)ಅಡಿ ಉನ್ನತ ಶಿಕ್ಷಣವನ್ನು ಪ್ರಸಕ್ತ ಸಾಲಿನಿಂದ ಉಚಿತವಾಗಿ ನೀಡಲಾಗುವುದು. ಎಲ್ಲ ರೀತಿಯ ಶುಲ್ಕ ಮನ್ನಾ ಮಾಡಲಿದ್ದು, ಅಷ್ಟೂ ಹಣವನ್ನು ವಿವಿಯೇ ಭರಿಸಲಿದೆ. ಶುಲ್ಕ ವಿನಾಯಿತಿಯಿಂದ ವಿದ್ಯಾರ್ಥಿಯೊಬ್ಬರಿಗೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ,’’ ಎಂದರು.
100 ಕೋಟಿ ರೂ. ಅನುದಾನಕ್ಕೆ ಮನವಿ
‘‘ನೂತನ ವಿವಿ ಕ್ಯಾಂಪಸ್ ನಿರ್ಮಿಸಲು ಚಿಕ್ಕಬಳ್ಳಾಪುರ ಜಿಲ್ಲೆಯ ಎಚ್.ಕ್ರಾಸ್ ಬಳಿ 172 ಎಕರೆ ಮಂಜೂರಾತಿ ದೊರೆತಿದೆ. ಈ ಪೈಕಿ 110.25 ಎಕರೆಯನ್ನು ವಿವಿಗೆ ಹಸ್ತಾಂತರಿಸಿದ್ದು, ಬಾಕಿ ಜಮೀನನ್ನು ಸದ್ಯದಲ್ಲೇ ನೀಡುವ ವಾಗ್ದಾನ ಸರಕಾರದಿಂದ ಲಭ್ಯವಾಗಿದೆ. ವಿವಿಗೆ ಕಟ್ಟಡಸಹಿತ ಮೂಲಸೌಕರ್ಯ ಒದಗಿಸಲು ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ 100 ಕೋಟಿ ರೂ. ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಸದ್ಯ 20 ಕೋಟಿ ರೂ. ಹಣ ದೊರೆತಿದ್ದು, ಹೆಚ್ಚಿನ ಕೋರ್ಸ್‌ಗಳ ಆರಂಭಕ್ಕೆ ಅಧಿಕ ಹಣ ಬೇಕಿದೆ,’’ ಎಂದರು.
ವಿವಿ ಕುಲಸಚಿವ ಪ್ರೊ. ಎಂ.ಎಸ್.ರೆಡ್ಡಿ, ಮೌಲ್ಯಮಾಪನ ವಿಭಾಗದ ಮುಖ್ಯಸ್ಥ ಪ್ರೊ. ಸುಂದರರಾಜ್ ಅರಸು ಹಾಜರಿದ್ದರು.
ಹೊಸ ಕೋರ್ಸ್ ಕಲಿಕೆಗೆ ಅವಕಾಶ
2018-19ನೇ ಸಾಲಿನಿಂದ ನಾಲ್ಕು ಪದವಿ ಕೋರ್ಸ್(ಬಿಬಿಎಂ-ಏವಿಯೇಷನ್, ಆ್ಯನಿಮೇಷನ್ ಮಲ್ಟಿಮೀಡಿಯಾ, ಒಳಾಂಗಣ ವಿನ್ಯಾಸ, ತರ್ಕಶಾಸ್ತ್ರ) ಹಾಗೂ ಎಂಟು ಸ್ನಾತಕೋತ್ತರ ಕೋರ್ಸ್(ಎಂ.ಎ.-ಆಂಗ್ಲ ಭಾಷೆ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ. ಎಂಎಸ್ಸಿ-ಗಣಿತಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಗಣಕ ವಿಜ್ಞಾನ) ಆರಂಭಕ್ಕೆ ಸರಕಾರ ಒಪ್ಪಿಗೆ ಸೂಚಿಸಿದೆ. ಈಗಾಗಲೇ ಎಂ.ಎ.-ಕನ್ನಡ, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ ಹಾಗೂ ಎಂಎಸ್‌ಡಬ್ಲ್ಯು(ಸಮಾಜಕಾರ್ಯ) ಕೋರ್ಸ್‌ಗಳನ್ನು ಕಲಿಸಲಾಗುತ್ತಿದೆ ಎಂದು ಕುಲಪತಿ ತಿಳಿಸಿದರು.