ಉಬರ್ ನ ಈ ಹೊಸ ಆಪ್ ನ ಗಾತ್ರ ಕೇವಲ ಮೂರು ಸೆಲ್ಫಿಗಳಷ್ಟು ಮಾತ್ರ!
ನವದೆಹಲಿ: ಸ್ಯಾನ್ ಫ್ರಾಕ್ಸಿಸ್ಕೋದಲ್ಲಿ ಕೇಂದ್ರ ಕಚೇರಿ ಹೊಂದಿರುವ ಉಬರ್ ಕ್ಯಾಬ್ ಸಂಸ್ಥೆ ಅತ್ಯಂತ ಕಡಿಮೆ ಗಾತ್ರ ಅಂದ್ರೆ ಕೇವಲ 5 ಎಂಬಿಯಷ್ಟು ಗಾತ್ರವುಳ್ಳ ಆಪ್ ನ್ನು ಬಿಡುಗಡೆ ಮಾಡಿದೆ.
ಮೊದಲ ಹಂತದಲ್ಲಿ ಭಾರತದ ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರಿಗೆ ಈ ಕಡಿಮೆ ಗಾತ್ರದ ಆಪ್ ಲಭ್ಯವಿರಲಿದೆ. ಮ್ಯಾಪ್, ಪ್ರಾಡಕ್ಟ್ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿರುವ ಮಾಣಿಕ್ ಗುಪ್ತ ಈ ಬಗ್ಗೆ ಮಾತನಾಡಿದ್ದು, ಹಳೆಯ, ಕಡಿಮೆ ಮೆಮೊರಿ ಇರುವ ಫೋನ್ ಗಳಿಗಾಗಿಯೇ ಕಡಿಮೆ ಗಾತ್ರದ ಆಪ್ ನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.
ಶೀಘ್ರವೇ ಬೇರೆಡೆಗಳಿಗೂ ಉಬರ್ ನ ಕಡಿಮೆ ಗಾತ್ರದ ಆಪ್ ಗಳನ್ನು ಪರಿಚಯಿಸಲಾಗುತ್ತದೆ, ಭಾರತದಲ್ಲಿ ಪ್ರಾಯೋಗಿಕವಾಗಿ ದೆಹಲಿ, ಜೈಪುರ, ಹೈದರಾಬಾದ್ ನಗರಗಳಲ್ಲಿ ಆಪ್ ಬಿಡುಗಡೆಯಾಗಿದೆ. ಉಬರ್ ಗೆ 75 ಮಿಲಿಯನ್ ಸಕ್ರಿಯ ಗ್ರಾಹಕರಿದ್ದು, ಪ್ರತಿ ದಿನ 15 ಮಿಲಿಯನ್ ಟ್ರಿಪ್ ಗಳು ದಾಖಲಾಗುತ್ತವೆ. ಆಪ್ ಗಳಲ್ಲಿ ಶೀಘ್ರವೇ ಎಲ್ಲಾ ಭಾಷೆಗಳನ್ನೂ ಅಳವಡಿಸಲಾಗುತ್ತದೆ ಎಂದು ಮಾಣಿಕ್ ಗುಪ್ತ ತಿಳಿಸಿದ್ದಾರೆ.