ಚಾರ್ಮಾಡಿ ಘಾಟ್ ಮಣ್ಣು ತೆರೆವು, ಏಕಮುಖ ಸಂಚಾರ ಆರಂಭ
ಮಂಗಳೂರು: ಭಾರೀ ಮಳೆಗೆ ಒಂಭತ್ತು ಕಡೆ ಗುಡ್ಡ ಕುಸಿದು ಸೋಮವಾರ ಸಂಜೆಯಿಂದ ಸಂಚಾರ ಸ್ಥಗಿತವಾಗಿದ್ದ ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಏಕಮುಖ ಸಂಛಾರ ಪ್ರಾರಂಭವಾಗಿದೆ.
ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತದಿಂದ ರಸ್ತೆಗೆ ಬಿದ್ದಿದ್ದ ಮಣ್ಣು ಮತ್ತು ಮರಗಳ ತೆರವು ಕಾರ್ಯಾಚಣೆ ಭಾಗಷಃ ಪೂರ್ಣಗೊಂಡಿದೆ. ಇದಕ್ಕಾಗಿ 4 ಕ್ಕೂ ಹೆಚ್ಚು ಜೆಸಿಬಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಈಗ ಏಕಮುಖ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ಎರಡು ದಿನ ಸಂಚಾರ ಸ್ಥಗಿತ.
ಘಾಟ್ ರಸ್ತೆಯಲ್ಲಿರುವ ಮಣ್ಣು, ಮರಗಳ ತೆರವಿಗೆ ಇನ್ನೂ ಕಾಲಾವಕಾಶ ಬೇಕಾಗಿದೆ. ಹೀಗಾಗಿ ಇನ್ನೆರಡು ದಿನಗಳ ಕಾಲ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಭೇಟಿ ನಿಡಿದ್ದ ಶಾಸಕ ಹರೀಶ್ ಪೂಂಜಾ ಸ್ಥಳ ಪರಿಶೀಲನೆ ನಡೆಸಿದ್ದು ಎರಡು ದಿನಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿ ಸಂಪೂರ್ಣ ತೆರವು ಕಾಮಗಾರಿ ನಡೆಸುವಂತೆ ಸೂಚಿಸಿದ್ದಾರೆ.
ಏತನ್ಮಧ್ಯೆ ಚಾರ್ಮಾಡಿ ಘಾಟ್ ನಲ್ಲಿ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಗೆ ಚಾರ್ಮಾಡಿ ಘಾಟಿಯ ಸುಮಾರು ಒಂಭತ್ತು ಕಡೆಗಳಲ್ಲಿ ಗುಡ್ಡ ಕುಸಿತವಾಗಿತ್ತು. ಎರಡೂ ಕಡೆಗಳಲ್ಲಿ ಒಟ್ಟು 210 ವಾಹನಗಳು ರಸ್ತೆ ಮಧ್ಯೆ ಸಿಲುಕಿದ್ದವು. ಇದರಲ್ಲಿ ಸುಮಾರು 1,500 ಪ್ರಯಾಣಿಕರಿದ್ದರು. ಮಕ್ಕಳು, ಹಿರಿಯರು ಸೇರಿ ಅಪಾರ ಪ್ರಯಾಣಿಕರು ಆಹಾರ, ನೀರು, ಔಶಧಗಳಿಲ್ಲದೆ ಪರದಾಡಿದ್ದರು.