EBM News Kannada
Leading News Portal in Kannada

ಒಂದೇ ಕುಟುಂಬದ 7 ಮಂದಿ ಕೊಂದಿದ್ದವನ ಕ್ಷಮಾದಾನಕ್ಕೆ ರಾಷ್ಟ್ರಪತಿ ಕೋವಿಂದ್ ನಿರಾಕರಣೆ!

0

ನವದೆಹಲಿ: ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಕ್ಷಮಾದಾನ ಅರ್ಜಿಯೊಂದನ್ನು ತಿರಸ್ಕರಿಸಿದ್ದಾರೆ.

ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ್ದ ಅಪರಾಧಿ ಕ್ಷಮೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ್ದಾರೆ. ವಿಶೇಷ ವೆಂದರೆ ಈ ಪ್ರಕರಣವು ಕೋವಿಂದ್‌ ಹಾಲಿ ಹುದ್ದೆ ನಿರ್ವಹಿಸುವುದಕ್ಕೆ ಮುನ್ನ ರಾಜ್ಯಪಾಲ ರಾಗಿದ್ದ ಬಿಹಾರಕ್ಕೆ ಸೇರಿದ್ದಾಗಿದ್ದು, ಬಿಹಾರದ ವೈಶಾಲಿ ಜಿಲ್ಲೆಯ ರಾಮ್​ಪುರ್​ ಶ್ಯಾಮಚಂದ್​ ಗ್ರಾಮದಲ್ಲಿ 2006 ರ ಜನವರಿ 1 ರಂದು ಜಗತ್​ ರಾಯ್​ ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ್ದ.

2013ರಲ್ಲಿ ಸುಪ್ರೀಂಕೋರ್ಟ್‌ ಬಿಹಾರದ ಜಗತ್‌ ರಾಯ್‌ಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಎತ್ತಿ ಹಿಡಿದಿತ್ತು. ಬಳಿಕ ಈತ ಕ್ಷಮಾದಾನ ಕೋರಿ 2017ರಲ್ಲೇ ಅರ್ಜಿ ಸಲ್ಲಿಸಿದ್ದ. ಆದರೆ, 14ನೇ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರು ರಾಯ್​ ನ ಅರ್ಜಿಯ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ರಾಮನಾಥ ಕೋವಿಂದ್​ ಅವರು ಅಧಿಕಾರ ಸ್ವೀಕರಿಸಿದ ನಂತರ ರಾಯ್​ ಅರ್ಜಿಯ ಕುರಿತು ಗೃಹ ಸಚಿವಾಲಯ ಮತ್ತು ಕಾನೂನು ತಜ್ಞರ ಸಲಹೆ ಪಡೆದು ಅರ್ಜಿಯನ್ನು ತಿರಸ್ಕರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ.

ಕಾನೂನು ಹಾಗೂ ಇತರ ಪರಿಣಿತರ ಜೊತೆ 10 ತಿಂಗಳವರೆಗೆ ಸಮಾಲೋಚನೆ ನಡೆಸಿ ರಾಷ್ಟ್ರಪತಿ ಕೋವಿಂದ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.