EBM News Kannada
Leading News Portal in Kannada

ಅಮಿತ್ ಶಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹಿಸಿ ರಾಷ್ಟ್ರಪತಿಗೆ ಪತ್ರ

0


ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಗೆ ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕೂಡಲೆ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯು ರಾಷ್ಟ್ರಪತಿಗೆ ಪತ್ರ ಬರೆದಿದೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ದಸಂಸ ರಾಜ್ಯ ಸಮಿತಿ ಸಭೆಯಲ್ಲಿ ಮೇಲ್ಕಂಡ ನಿರ್ಣಯ ತೆಗೆದುಕೊಂಡಿದೆ. ದಸಂಸ ಸಂಸ್ಥಾಪಕ ವಿ.ನಾಗರಾಜ್ ಮಾತನಾಡಿ, ‘ಅಂಬೇಡ್ಕರ್ ಬಗ್ಗೆ ಉದ್ಧಟತನದಿಂದ ಮಾತನಾಡಿರುವ ಅಮಿತ್ ಶಾ ಮಾತುಗಳಿಂದ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಯ ಕೋಮುವಾದಿ ದೇಶದ್ರೋಹಿಗಳ ನಿಜವಾದ ಬಣ್ಣ ಬಯಲಾಗಿದೆ’ ಎಂದು ಹೇಳಿದರು.

ಅಂಬೇಡ್ಕರ್ ಇಲ್ಲದಿದ್ದರೆ ಅಮಿತ್ ಶಾ ಗುಜರಾತ್‍ನಲ್ಲಿ ಗುಜರಿ ಮಾಡಿಕೊಂಡಿರಬೇಕಿತ್ತು. ಅಂಬೇಡ್ಕರ್ ಕುರಿತು ಅಗೌರವವಾಗಿ ಮಾತನಾಡಿರುವ ಇವರಿಗೆ ದೇಶದ ಗೃಹ ಮಂತ್ರಿ ಹುದ್ದೆ ನಿರ್ವಹಿಸುವ ಹಕ್ಕಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್‍ನವರು ಸಂವಿಧಾನ ವಿರೋಧಿಗಳಾಗಿದ್ದಾರೆ. ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆಂದರೆ ಇಡೀ ದೇಶಕ್ಕೆ ಅವಮಾನ ಮಾಡಿದಂತೆ. ಇಂತಹ ಮೂರ್ಖ ಅಮಿತ್ ಶಾ ವಿರುದ್ಧ ದೇಶದ್ರೋಹ ಪಕ್ರರಣ ದಾಖಲಿಸಬೇಕು ಮತ್ತು ಇನ್ನು ಮುಂದೆ ಅಂಬೇಡ್ಕರ್ ಬಗ್ಗೆ ಯಾವ ನಾಯಕರೂ ಕೇವಲವಾಗಿ ಮಾತನಾಡದೇ ಇರುವ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ನಾಗರಾಜ್ ಆಗ್ರಹಿಸಿದರು.

ಈ ವೇಳೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಎನ್.ಅಣ್ಣಯ್ಯ, ರಾಜ್ಯ ಸಮಿತಿ ಸದಸ್ಯರಾದ ರಾಜಶೇಖರ್, ದೇವಪ್ಪ ದೀವರಮನಿ, ಈ.ಮುನಿರಾಜು, ಸುನಂದಪ್ಪ, ಎಸ್.ಎಂ.ದಿವಾಕರ್, ಚಂದ್ರಿಕಾ, ಪದ್ಮಾ ಸೇರಿದಂತೆ ಹಲವು ಉಪಸ್ಥಿತರಿದ್ದರು.

Leave A Reply

Your email address will not be published.