EBM News Kannada
Leading News Portal in Kannada

ಆಸ್ಟ್ರೇಲಿಯಾದಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಮಾಧ್ಯಮ ಸಂಸ್ಥೆಯಿಂದ ಜಡೇಜಾಗೆ ಟೀಕೆ

0


ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ವಿಮಾನ ನಿಲ್ದಾಣದಲ್ಲಿ ತನ್ನ ಕುಟುಂಬದ ಚಿತ್ರವನ್ನು ಸೆರೆ ಹಿಡಿಯದಂತೆ ವರದಿಗಾರನೋರ್ವನಿಗೆ ಸೂಚಿಸಿದಾಗ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯು ಇತ್ತೀಚಿಗೆ ಮೈದಾನದಾಚೆ ವಿವಾದಕ್ಕೆ ಸಾಕ್ಷಿಯಾಗಿತ್ತು. ಈಗ ಇನ್ನೋರ್ವ ಕ್ರಿಕೆಟಿಗ ಇನ್ನೊಂದು ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಎಡಗೈ ಸ್ಪಿನ್ನರ್ ಜಡೇಜಾ ಶನಿವಾರ ಮೆಲ್ಬರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು,ಅದು ಕೆಲವು ಮಾಧ್ಯಮ ಸಂಸ್ಥೆಗಳಿಗೆ ಅಪಥ್ಯವಾದಂತಿದೆ. ಜಡೇಜಾ ಇಂಗ್ಲಿಷ್‌ನಲ್ಲಿ ಕೇಳಲಾಗಿದ್ದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರಿಂದ ೭ನ್ಯೂಸ್ ಸುದ್ದಿಗೋಷ್ಠಿಯನ್ನು ‘ವಿಚಿತ್ರ ಮತ್ತು ನೀರಸ’ ಎಂದು ಬಣ್ಣಿಸಿದೆ. ಕೊಹ್ಲಿ ತನ್ನ ಕುಟುಂಬದ ಫೋಟೊ ತೆಗೆಯದಂತೆ ಇದೇ ೭ನ್ಯೂಸ್‌ನ ವರದಿಗಾರನಿಗೆ ಸೂಚಿಸಿದ್ದರು.

ಜಡೇಜಾ ತನ್ನ ಸ್ವಭಾಷೆ ಹಿಂದಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ್ದು ಆಸ್ಟ್ರೇಲಿಯಾದ ಪತ್ರಕರ್ತರಿಗೆ ಕಿರಿಕಿರಿಯನ್ನುಂಟು ಮಾಡಿತ್ತು ಎಂದೂ ೭ನ್ಯೂಸ್ ಟೀಕಿಸಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ೭ನ್ಯೂಸ್‌ನ ವರದಿಯನ್ನು ’ಬೂಟಾಟಿಕೆ’ ಎಂದು ಬಣ್ಣಿಸಿದ್ದಾರೆ.

ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಕೊಹ್ಲಿ ವಿಮಾನ ನಿಲ್ದಾಣದಲ್ಲಿ ಕೆಲವು ಸುದ್ದಿಗಾರರೊಂದಿಗೆ ತೀವ್ರ ಮಾತಿನ ಚಕಮಕಿಯಲ್ಲಿ ತೊಡಗಿಕೊಂಡಿದ್ದರು. ತನ್ನ ವೃತ್ತಿಜೀವನದಲ್ಲಿಯ ಪ್ರಚಾರದ ಬೆಳಕಿನಿಂದ ತನ್ನ ವೈಯಕ್ತಿಕ ಜೀವನವನ್ನು ದೂರವಿರಿಸಲು ಬಯಸುವ ಕೊಹ್ಲಿ ಮಾಧ್ಯಮಗಳು ತನ್ನ ಮತ್ತು ತನ್ನ ಕುಟುಂಬದ ಚಿತ್ರಗಳನ್ನು ತೆಗೆಯುತ್ತಿರುವುದನ್ನು ಕಂಡು ಅಸಮಾಧಾನಗೊಂಡಿದ್ದರು. ಹೀಗಾಗಿ ತನ್ನ ಸಹನೆಯನ್ನು ಕಳೆದುಕೊಂಡಿದ್ದರು. ಆದರೆ ಅದು ಕೇವಲ ತಪ್ಪು ತಿಳುವಳಿಕೆಯಾಗಿತ್ತು ಎನ್ನುವುದು ನಂತರ ಕಂಡುಬಂದಿತ್ತು.

ಕೊಹ್ಲಿ ಮತ್ತು ಅವರ ಕುಟುಂಬ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಕೆಲವು ಪತ್ರಕರ್ತರು ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೊಲಾಂಡರ್‌ನ್ನು ಸಂದರ್ಶಿಸುತ್ತಿದ್ದರು ಮತ್ತು ಚಾನೆಲ್ ೭ನ್ಯೂಸ್‌ನ ಕ್ಯಾಮೆರಾಗಳು ಕೊಹ್ಲಿ ಕುಟುಂಬದತ್ತ ತಿರುಗಿದ್ದವು,ಇದು ಭಾರತೀಯ ಕ್ರಿಕೆಟಿಗನಿಗೆ ಹಿಡಿಸಿರಲಿಲ್ಲ. ತನ್ನ ಖಾಸಗಿತನವನ್ನು ಗೌರವಿಸುತ್ತಿಲ್ಲ ಎಂದು ಅವರು ಟಿವಿ ವರದಿಗಾರನ ವಿರುದ್ಧ ಕಿಡಿಕಾರಿದ್ದರು.

ಆದರೆ ಮಕ್ಕಳ ಚಿತ್ರವನ್ನು ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆಯ ಬಳಿಕ ಕೊಹ್ಲಿ ತಣ್ಣಗಾಗಿದ್ದರು ಮತ್ತು ಚಾನೆಲ್ ನ್ಯೂಸ್‌ನ ಕ್ಯಾಮೆರಾಮನ್‌ಗೆ ಹಸ್ತಲಾಘವವನ್ನೂ ನೀಡಿದ್ದರು ಎಂದು ವರದಿಯಾಗಿದೆ.

Leave A Reply

Your email address will not be published.