EBM News Kannada
Leading News Portal in Kannada

ತಮ್ಮ ಸ್ಥಾನಕ್ಕೆ ಅಶ್ವಿನ್ ಸೂಚಿಸಿದ ಮತ್ತೊಬ್ಬ ಆಲ್‌ ರೌಂಡರ್‌ ಯಾರು ಗೊತ್ತೇ?

0


ಮುಂಬೈ: ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಖ್ಯಾತ ಆಫ್ ಸ್ಪಿನ್ನರ್, ಆಲ್‌ ರೌಂಡರ್ ರವಿಚಂದ್ರನ್ ಅಶ್ವಿನ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿರುವ ನಡುವೆಯೇ, ಭಾರತೀಯ ಕ್ರಿಕೆಟ್ ನಲ್ಲಿ ತಮ್ಮ ಸ್ಥಾನವನ್ನು ಯಶಸ್ವಿಯಾಗಿ ತುಂಬಬಲ್ಲ ವ್ಯಕ್ತಿಯಾಗಿ ಮತ್ತೊಬ್ಬ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಹೆಸರಿಸಿದ್ದಾರೆ.

ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯ ಗಬ್ಬಾದಲ್ಲಿ ಬುಧವಾರ ಡ್ರಾನಲ್ಲಿ ಅಂತ್ಯವಾಗುತ್ತಿದ್ದಂತೆ ಅಶ್ವಿನ್ ನಿವೃತ್ತಿ ಘೋಷಿಸಿದ್ದರು. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಸುಂದರ್ ಜಾಲತಾಣ ಖಾತೆಯಲ್ಲಿ ಖ್ಯಾತ ಆಟಗಾರನನ್ನು ಅಭಿನಂದಿಸಿ, “ಅಶ್ ಅಣ್ಣಾ, ನೀವು ಕೇವಲ ತಂಡದ ಸಹ ಸದಸ್ಯರಲ್ಲ; ನಮಗೆ ಸದಾ ಸ್ಫೂರ್ತಿ. ನಿಮ್ಮೊಂದಿಗೆ ಮೈದಾನ ಮತ್ತು ಡ್ರೆಸಿಂಗ್ ರೂಂ ಹಂಚಿಕೊಂಡಿರುವುದು ನನಗೆ ಸಂದ ಗೌರವ” ಎಂದು ಪ್ರತಿಕ್ರಿಯಿಸಿದ್ದರು.

“ತಮಿಳುನಾಡಿನಿಂದಲೇ ಬಂದಿರುವ ನಾನು, ನಿಮ್ಮ ಆಟವನ್ನು ನಿಕಟವಾಗಿ ನೋಡುತ್ತಲೇ ಬೆಳೆದಿದ್ದೇನೆ ಮತ್ತು ನಿಮ್ಮೊಂದಿಗೆ ಬೆಳೆಯುತ್ತಿದ್ದೇನೆ. ಪ್ರತಿಯೊಂದು ಕ್ಷಣ ಕೂಡಾ ವಿಶೇಷ ಗೌರವ. ಮೈದಾನದಲ್ಲಿ ಮತ್ತು ಹೊರಗೆ ನಿಮ್ಮಿಂದ ಕಲಿತಿರುವುದನ್ನು ನಾನು ಸದಾ ಮುಂದುವರಿಸುತ್ತೇನೆ. ಮುಂದಿನ ಭವಿಷ್ಯದಲ್ಲಿ ಯಶಸ್ಸು ಮತ್ತು ಸಂತೋಷ ಬಯಸುತ್ತೇನೆ” ಎಂದು ವಿವರಿಸಿದ್ದರು.

ಇದಕ್ಕೆ ಶುಕ್ರವಾರ ಎಕ್ಸ್‌ನಲ್ಲೇ ಪ್ರತಿಕ್ರಿಯಿಸಿರುವ ಅಶ್ವಿನ್, “ತುಪ್ಪಾಕಿಯಾ ಪುಡಿಂಗಾ ವಾಷ್!, ಸಂತೋಷಕೂಟದಲ್ಲಿ ನೀವು ಮಾತನಾಡಿರುವ 2 ನಿಮಿಷ ಅತ್ಯುತ್ತಮ” ಎಂದು ಹೇಳಿದ್ದಾರೆ.

ಅಶ್ವಿನ್ ಅವರ ಮೊದಲ ವಾಕ್ಯವು ತಮಿಳಿನ ಸೂಪರ್ ಸ್ಟಾರ್ ವಿಜಯ್ ಅವರ ಇತ್ತೀಚಿನ ಚಿತ್ರದ ಸಾಲಾಗಿದೆ. ತುಪ್ಪಾಕಿಯಾ ಪುಡಿಂಗ ಎಂದರೆ “ಈ ಬಂದೂಕು ಹಿಡಿದುಕೊ” ಎಂದಾಗಿದೆ.



Leave A Reply

Your email address will not be published.