EBM News Kannada
Leading News Portal in Kannada

ಬಿಜೆಪಿ ಸಂಸದೆಯಿಂದ ಪ್ರಿಯಾಂಕಾ ಗಾಂಧಿಗೆ 1984ರ ದಂಗೆಗಳನ್ನು ನೆನಪಿಸುವ ಬ್ಯಾಗ್ ಉಡುಗೊರೆ

0


ಹೊಸದಿಲ್ಲಿ : ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿಯವರು ಶುಕ್ರವಾರ ‘1984’ ಎಂದು ಕೆಂಪು ಅಕ್ಷರಗಳಲ್ಲಿ ಬರೆಯಲಾದ ಬ್ಯಾಗ್‌ ವೊಂದನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಪ್ರಿಯಾಂಕಾ ಇತ್ತೀಚಿಗೆ ಸಂಸತ್ತಿಗೆ ಫೆಲೆಸ್ತೀನ್ ಮತ್ತು ಬಾಂಗ್ಲಾದೇಶ ಕುರಿತು ಸಂದೇಶಗಳಿದ್ದ ಬ್ಯಾಗ್‌ ಗಳನ್ನು ತಂದಿದ್ದ ಹಿನ್ನೆಲೆಯಲ್ಲಿ ಭುವನೇಶ್ವರ ಸಂಸದೆ ಸಾರಂಗಿ ಈ ಉಡುಗೊರೆ ನೀಡಿದ್ದಾರೆ.

ಸಾರಂಗಿ ಸಂಸತ್ತಿನ ಕಾರಿಡಾರ್‌ನಲ್ಲಿ ಪ್ರಿಯಾಂಕಾರಿಗೆ ಬ್ಯಾಗ್ ನೀಡಿದ್ದು, ಅದನ್ನು ಸ್ವೀಕರಿಸಿದ ಅವರು ಅದಕ್ಕೆ ಹೆಚ್ಚಿನ ಮಹತ್ವ ನೀಡದೆ ಮುಂದಕ್ಕೆ ಸಾಗಿದರು.

ಬ್ಯಾಗ್‌ನ ಮೇಲೆ ‘1984ರ ದಂಗೆಗಳು’ ಎಂದು ಬರೆಯಲಾಗಿತ್ತು ಮತ್ತು ಇದು ತನ್ನ ಚೀಲಗಳೊಂದಿಗೆ ಹೇಳಿಕೆಗಳನ್ನು ನೀಡುವ ಕಾಂಗ್ರೆಸ್ ನಾಯಕಿ ಲೋಕಸಭೆಯಲ್ಲಿ ಎತ್ತಲೇಬೇಕಾದ ವಿಷಯವಾಗಿದೆ ಎಂದು ಸಾರಂಗಿ ಹೇಳಿದರು.

ಫೆಲೆಸ್ತೀನಿಯರಿಗೆ ಬೆಂಬಲದ ದ್ಯೋತಕವಾಗಿ ಸೋಮವಾರ ‘ಫೆಲೆಸ್ತೀನ್’ ಎಂಬ ಬರಹವಿದ್ದ ಬ್ಯಾಗ್‌ ನ್ನು ಸಂಸತ್ತಿಗೆ ತಂದಿದ್ದ ಪ್ರಿಯಾಂಕಾ, ಮಂಗಳವಾರ ‘ಬಾಂಗ್ಲಾದೇಶದ ಹಿಂದುಗಳು ಮತ್ತು ಕ್ರೈಸ್ತರ ಪರವಾಗಿ ನಿಲ್ಲಿ ’ ಎಂಬ ಸಂದೇಶವಿದ್ದ ಹ್ಯಾಂಡ್‌ ಬ್ಯಾಗ್‌ನೊಂದಿಗೆ ಆಗಮಿಸಿದ್ದರು.

1984ರಲ್ಲಿ ಪ್ರಿಯಾಂಕಾರ ಅಜ್ಜಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ಭುಗಿಲೆದ್ದಿದ್ದ ದಂಗೆಗಳಲ್ಲಿ ದಿಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಸಾವಿರಾರು ಸಿಕ್ಖರು ಜೀವ ಕಳೆದುಕೊಂಡಿದ್ದರು.

Leave A Reply

Your email address will not be published.